ADVERTISEMENT

ಚಾಮರಾಜನಗರ ದುರಂತ: ಹೈಕೋರ್ಟ್‌ ಕಣ್ಗಾವಲಿನ ತನಿಖೆಯೇ ನಡೆಯಲಿ

ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 24 ಜನ ಮೃತಪಟ್ಟ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಮೇ 2021, 20:30 IST
Last Updated 10 ಮೇ 2021, 20:30 IST
ಚಾಮರಾಜನಗರದ ಜಿಲ್ಲಾ ಕೋವಿಡ್–19 ಆಸ್ಪತ್ರೆ
ಚಾಮರಾಜನಗರದ ಜಿಲ್ಲಾ ಕೋವಿಡ್–19 ಆಸ್ಪತ್ರೆ   

ಬೆಂಗಳೂರು: ಚಾಮರಾಜನಗರ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಮೇ 3ರಂದು ಆಮ್ಲಜನಕದ ಕೊರತೆಯಿಂದ 24 ಜನರು ಮೃತಪಟ್ಟಿರುವ ಪ್ರಕರಣದ ಕುರಿತು ಹೈಕೋರ್ಟ್‌ ರಚಿಸಿರುವ ನ್ಯಾಯಮೂರ್ತಿಗಳ ಸಮಿತಿಯ ತನಿಖೆಯೇ ಸೂಕ್ತ, ಅದಕ್ಕೇ ಹೆಚ್ಚು ತೂಕ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಚಾಮರಾಜನಗರ ದುರ್ಘಟನೆ ಬಗ್ಗೆ ಐದು ಬಗೆಯ ತನಿಖೆಗಳು ಆರಂಭವಾಗಿವೆ. ಐಎಎಸ್‌ ಅಧಿಕಾರಿ ಶಿವಯೋಗಿ ಸಿ. ಕಳಸದ ಪ್ರಾಥಮಿಕ ತನಿಖೆ ನಡೆಸುತ್ತಿದ್ದರೆ, ಆರೋಗ್ಯ ಇಲಾಖೆ ಆಂತರಿಕ ತನಿಖೆ ನಡೆಸುತ್ತಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ತನ್ನದೇ ಪೊಲೀಸ್‌ ವಿಭಾಗಕ್ಕೆ ತನಿಖೆಯ ಹೊಣೆ ಒಪ್ಪಿಸಿದೆ.

ಈ ಬಗ್ಗೆ ವಿಚಾರಣೆ ನಡೆಸುವ ಕುರಿತಾಗಿ ಆಲೋಚನೆ ನಡೆಸಲಿದ್ದೇವೆ ಎಂದು ಹೈಕೋರ್ಟ್‌ನ ನ್ಯಾಯಪೀಠ ಹೇಳಿತ್ತು. ಏತನ್ಮಧ್ಯೆಯೇ, ನಿವೃತ್ತ ನ್ಯಾಯಮೂರ್ತಿ ಬಿ.ಎ. ಪಾಟೀಲ್‌ ನೇತೃತ್ವದಲ್ಲಿ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ತರಾತುರಿಯಲ್ಲಿ ಆದೇಶ ಹೊರಡಿಸಿದೆ.

ADVERTISEMENT

ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ನಿವೃತ್ತ ನ್ಯಾಯಮೂರ್ತಿಗಳಾದ ಎ.ಎನ್‌. ವೇಣು
ಗೋಪಾಲಗೌಡ ಮತ್ತು ಕೆ.ಎನ್‌. ಕೇಶವ ನಾರಾಯಣ ಅವರನ್ನೊಳಗೊಂಡ ಸಮಿತಿ ನೇಮಿಸಿದೆ.

ಈ ಬೆಳವಣಿಗೆಗಳ ಕುರಿತು ‘ಪ್ರಜಾವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡಿರುವ ಕಾನೂನು ತಜ್ಞರು, ಹೈಕೋರ್ಟ್‌ ಉಸ್ತುವಾರಿಯ ತನಿಖೆಯೇ ಮುಂದುವರಿಯುವುದು ಸೂಕ್ತ ಎಂದು ಹೇಳಿದ್ದಾರೆ.

ಹೈಕೋರ್ಟ್‌ ಉಸ್ತುವಾರಿಯ ತನಿಖೆಯೇ ಉತ್ತಮ: ನ್ಯಾಯಾಂಗ ತನಿಖೆಗಳ ವಿಚಾರ ಬಂದಾಗ ನ್ಯಾಯಾಲಯಗಳ ಉಸ್ತುವಾರಿಯಲ್ಲೇ ನಡೆಯಬೇಕು ಎಂಬ ಬೇಡಿಕೆ ಸಾಮಾನ್ಯವಾಗಿ ಕೇಳಿಬರುತ್ತದೆ. ಒಂದು ಪ್ರಕರಣದಲ್ಲಿ ಹೈಕೋರ್ಟ್‌ ವಿಚಾರಣೆ ಆರಂಭಿಸಿದರೆ ನ್ಯಾಯಾಲಯದ ಉಸ್ತುವಾರಿಯಲ್ಲೇ ತನಿಖೆ ನಡೆದರೆ ಹೆಚ್ಚು ಉತ್ತಮ. ಆದರೆ, ಚಾಮರಾಜನಗರ ಪ್ರಕರಣದಲ್ಲಿ ಸರ್ಕಾರ ಯಾವ ಅಂಶಗಳ ಕುರಿತು ತನಿಖೆ ಆದೇಶಿಸಿದೆ? ಹೈಕೋರ್ಟ್‌ ಯಾವ ಅಂಶಗಳ ಬಗ್ಗೆ ತನಿಖೆಗೆ ವಹಿಸಿದೆ? ಎಂಬುದನ್ನು ತಿಳಿಯಬೇಕಿದೆ.

ಒಂದೇ ಅಂಶಗಳ ಬಗ್ಗೆ ಎರಡು ತನಿಖೆ ಸರಿಯಲ್ಲ. ಹಾಗೆ ಆದಲ್ಲಿ ತೀರ್ಮಾನಗಳ ಸಂಘರ್ಷಕ್ಕೆ ಕಾರಣವಾಗುತ್ತದೆ. ಆಮ್ಲಜನಕದ ಕೊರತೆ, ಚಿಕಿತ್ಸೆ ಸೇರಿದಂತೆ ಯಾವ ವಿಷಯಗಳ ಕುರಿತು ಎರಡೂ ತನಿಖೆಗಳು ನಡೆಯುತ್ತವೆ ಎಂಬುದು ಸ್ಪಷ್ಟವಾಗಬೇಕು. ಎರಡೂ ತನಿಖೆಗಳು ಒಂದೇ ವಿಷಯದ ಕುರಿತು ನಡೆಯುವುದು ಸರಿಯಲ್ಲ. ಹಾಗೆ ಇರುವುದಾದರೆ ಹೈಕೋರ್ಟ್‌ ಉಸ್ತುವಾರಿಯಲ್ಲಿ ನಡೆಯುವ ತನಿಖೆಯೇ ಮುಂದುವರಿಯುವುದು ಸೂಕ್ತ.
-ಶಿವರಾಜ್‌ ವಿ. ಪಾಟೀಲ್‌,ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ

**
ಹೈಕೋರ್ಟ್‌ ನಿರ್ಧಾರವೇ ಅಂತಿಮ: ರೂಪಕ್‌ ಕುಮಾರ್‌ ದತ್ತ
ಚಾಮರಾಜನಗರ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ನಡೆದ ದುರ್ಘಟನೆ ಕುರಿತು ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿದೆ. ಪ್ರಕರಣದ ಕುರಿತು ತನಿಖೆ ನಡೆಸುವಂತೆ ಆಯೋಗದ ಪೊಲೀಸ್‌ ವಿಭಾಗಕ್ಕೆ ಆದೇಶಿಸಲಾಗಿದೆ. ಆದರೆ, ಈ ವಿಚಾರದಲ್ಲಿ ಹೈಕೋರ್ಟ್‌ ಮಧ್ಯಪ್ರವೇಶ ಮಾಡಿರುವುದರಿಂದ ಆಯೋಗ ಮುಂದುವರಿಯುವುದಿಲ್ಲ. ಈ ವಿಚಾರದಲ್ಲಿ ರಾಜ್ಯ ಸರ್ಕಾರ, ಮಾನವ ಹಕ್ಕುಗಳ ಆಯೋಗಕ್ಕಿಂತಲೂ ಹೈಕೋರ್ಟ್‌ ಉನ್ನತವಾದುದು.

ರಾಜ್ಯ ಸರ್ಕಾರ ವಿಚಾರಣಾ ಆಯೋಗದ ಕಾಯ್ದೆಯಡಿ ಆಯೋಗ ನೇಮಿಸಿದ್ದರೂ, ಹೈಕೋರ್ಟ್‌ ನೇಮಿಸಿರುವ ಸಮಿತಿಗೆ ಸಂಪೂರ್ಣ ಸಹಕಾರ ನೀಡಬೇಕಾಗುತ್ತದೆ. ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಯ ತನ್ನ ನಿಲುವನ್ನು ಬದಲಿಸಬೇಕಾದ ಅನಿವಾರ್ಯ ಎದುರಾಗಬಹುದು. ಹೈಕೋರ್ಟ್‌ ಉಸ್ತುವಾರಿಯಲ್ಲಿ ನಡೆಯುವ ತನಿಖೆಯನ್ನು ಸರ್ಕಾರವೂ ಬೆಂಬಲಿಸುವುದು ಉತ್ತಮ.

-ರೂಪಕ್‌ ಕುಮಾರ್‌ ದತ್ತ, ನಿವೃತ್ತ ಡಿಜಿಪಿ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ

**
ರಾಜ್ಯ ಸರ್ಕಾರದ ನಡೆ ತಪ್ಪು: ಉದಯ್ ಹೊಳ್ಳ
ಈ ಪ್ರಕರಣದಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ತನಿಖೆಗೆ ಆದೇಶಿಸುವ ಇಂಗಿತವನ್ನು ಹೈಕೋರ್ಟ್‌ ವ್ಯಕ್ತಪಡಿಸಿದ ಬಳಿಕ ರಾಜ್ಯ ಸರ್ಕಾರ ತರಾತುರಿಯಲ್ಲಿ ನ್ಯಾಯಾಂಗ ತನಿಖೆಗೆ ಆಯೋಗ ನೇಮಿಸಿರುವುದು ತಪ್ಪು.

ಹೈಕೋರ್ಟ್‌ ಸಮಿತಿಯಲ್ಲಿರುವ ನ್ಯಾ. ಎ.ಎನ್‌. ವೇಣುಗೋಪಾಲ ಗೌಡ, ನ್ಯಾ. ಕೆ.ಎನ್‌. ಕೇಶವ ನಾರಾಯಣ ಮತ್ತು ರಾಜ್ಯ ಸರ್ಕಾರ ನೇಮಿಸಿರುವ ಆಯೋಗದ ಮುಖ್ಯಸ್ಥ ಬಿ.ಎ. ಪಾಟೀಲ್‌ ಮೂವರೂ ಉತ್ತಮ ನ್ಯಾಯಾಧೀಶರೇ. ಆದರೆ, ಒಂದೇ ವಿಚಾರಕ್ಕೆ ಎರಡು ತನಿಖೆ ನಡೆಸುವುದು ಸರಿಯಾದ ಕ್ರಮವಲ್ಲ.

ಹೈಕೋರ್ಟ್‌ ತೀರ್ಮಾನದಿಂದಾಗಿ ಸರ್ಕಾರ, ಆಯೋಗ ರಚನೆಯನ್ನು ಹಿಂದಕ್ಕೆ ಪಡೆಯಬಹುದು. ನ್ಯಾ.ಬಿ.ಎ. ಪಾಟೀಲ್‌ ಅವರೇ ಹಿಂದೆ ಸರಿಯಲೂಬಹುದು. ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ನ್ಯಾಯಾಂಗ ತನಿಖೆಗಳನ್ನು ನ್ಯಾಯಾಂಗ ಯಾವತ್ತೂ ಒಪ್ಪಿಕೊಂಡಿಲ್ಲ. ತೀರ್ಮಾನಗಳ ಸಂಘರ್ಷಕ್ಕೆ ಎಡೆಮಾಡುವ ಪರ್ಯಾಯ ತನಿಖೆಗಳನ್ನು ಮುಂದುವರಿಸುವುದು ಸೂಕ್ತವಲ್ಲ.
–ಉದಯ್ ಹೊಳ್ಳ, ಹಿರಿಯ ವಕೀಲ

ಶಿವರಾಜ್‌ ವಿ. ಪಾಟೀಲ್‌, ರೂಪಕ್‌ ಕುಮಾರ್‌ ದತ್ತ, ಉದಯ್ ಹೊಳ್ಳ

ತರಾತುರಿಯಲ್ಲಿ ಆಯೋಗ ರಚಿಸಿದ್ದು ಏಕೆ?
ಚಾಮರಾಜನಗರ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತ ರಾಜ್ಯ ಸರ್ಕಾರದ ಕರ್ತವ್ಯಲೋಪಕ್ಕೆ ಸಾಕ್ಷ್ಯ ಒದಗಿಸಿದೆ. ಕೋವಿಡ್‌ ಜನರನ್ನು ಕಾಡುತ್ತಿರುವ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಕಾರಣಕ್ಕಾಗಿಯೇ ಹೈಕೋರ್ಟ್‌ ಮಧ್ಯಪ್ರವೇಶ ಮಾಡಿದೆ. 24 ಜನರ ಸಾವಿಗೆ ಸಂಭವಿಸಿದ ಗಂಭೀರ ಪ್ರಕರಣವನ್ನು ತನಿಖೆಗೆ ಒಪ್ಪಿಸುವ ಕುರಿತು ಹೈಕೋರ್ಟ್‌ ವಿಚಾರಣೆ ನಡೆಸುತ್ತಿತ್ತು. ಆಗಲೇ, ತರಾತುರಿಯಲ್ಲಿ ಆಯೋಗ ನೇಮಿಸುವ ಅಗತ್ಯ ಏನಿತ್ತು?

ಸರ್ಕಾರ ತನ್ನ ತಪ್ಪನ್ನು ಅರಿತುಕೊಂಡು ಆಯೋಗ ರಚನೆಯ ಆದೇಶವನ್ನು ವಾಪಸ್‌ ಪಡೆಯಬೇಕು. ಹೈಕೋರ್ಟ್‌ ಉಸ್ತುವಾರಿಯಲ್ಲಿ ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ತನಿಖೆ ನಡೆಸಲು ಮುಕ್ತ ಅವಕಾಶ ಕಲ್ಪಿಸಬೇಕು. ಆಗ ಮಾತ್ರ ದುರ್ಘಟನೆಯ ಹಿಂದಿರುವ ಎಲ್ಲ ಸತ್ಯಗಳೂ ಹೊರಬರಲು ಸಾಧ್ಯ.
– ಬಿ.ಟಿ. ವೆಂಕಟೇಶ್‌, ಹೈಕೋರ್ಟ್‌ ವಕೀಲ

**
ಹೈಕೋರ್ಟ್ ತನಿಖೆಗೆ ತೂಕ ಹೆಚ್ಚು
ತನ್ನ ಮೇಲ್ವಿಚಾರಣೆಯಲ್ಲಿಯೇ ಪ್ರಕರಣದ ತನಿಖೆ ನಡೆಸಲು ಖುದ್ದಾಗಿ ಹೈಕೋರ್ಟ್‌ ಮುಂದಾದ ಮೇಲೂ ಸರ್ಕಾರದಿಂದ ಪ್ರತ್ಯೇಕ ನ್ಯಾಯಾಂಗ ತನಿಖೆ ಅಗತ್ಯ ಇರಲಿಲ್ಲ. ಯಾರು ಏನೇ ಮಾಡಿದರೂ ಹೈಕೋರ್ಟ್‌ ಉಸ್ತುವಾರಿಯಲ್ಲಿ ನಡೆಯುವ ತನಿಖೆಗೇ ತೂಕ ಹೆಚ್ಚು. ಸರ್ಕಾರದ ತನಿಖಾ ಆಯೋಗ ಏನೇ ವರದಿ ಕೊಟ್ಟರೂ ಕೊನೆಯಲ್ಲಿ ನಿಲ್ಲುವುದು ಹೈಕೋರ್ಟ್‌ ನೀಡುವ ವರದಿಯೇ. ಜೊತೆಗೆ ಸರ್ಕಾರ ರಚಿಸಿದ ಆಯೋಗದ ವರದಿಯನ್ನು ಹೈಕೋರ್ಟ್‌ ತಿರಸ್ಕರಿಸಲೂಬಹುದು. ಎರಡೂ ವರದಿಗಳು ಒಂದೇ ರೀತಿ ಇರುತ್ತವೆಯೇ ಅಥವಾ ಬೇರೆ ಅಂಶಗಳನ್ನು ಒಳಗೊಂಡಿರುತ್ತವೆಯೇ ನೋಡೋಣ.

ಆಡಳಿತಾತ್ಮಕ ಲೋಪವೇ ಚಾಮರಾಜನಗರದ ಅನಾಹುತಕ್ಕೆ ಕಾರಣ. ಇದೊಂದು ನಾಚಿಕೆಗೇಡಿನ ಸಂಗತಿ. ಆಯಾ ಇಲಾಖೆಗಳು ಎಚ್ಚರ ವಹಿಸಿದ್ದರೆ, ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೆ ಇಂಥ ಘಟನೆನು ತಪ್ಪಿಸಬಹುದಿತ್ತು.

-ಡಾ.ಎಚ್‌.ಸುದರ್ಶನ್‌, ಆರೋಗ್ಯ ಕಾರ್ಯಪಡೆಯ ಮಾಜಿ ಅಧ್ಯಕ್ಷ, ವಿವೇಕಾನಂದ ಗಿರಿಜನ ಕಲ್ಯಾಣಕೇಂದ್ರದ ಗೌರವ ಕಾರ್ಯದರ್ಶಿ, ಬಿಳಿಗಿರಿರಂಗನಬೆಟ್ಟ

**
ತರಾತುರಿಯ ತೀರ್ಮಾನ ಹಿಂಪಡೆಯಲಿ: ಬಾನು ಮುಷ್ತಾಕ್‌
ಚಾಮರಾಜನಗರದಲ್ಲಿ ನಡೆದಿರುವುದು ಸರ್ಕಾರವೇ ನಿರ್ಲಕ್ಷ್ಯದಿಂದ ಮಾಡಿರುವ ಕೊಲೆ. ಸರ್ಕಾರ, ವಿರೋಧ ಪಕ್ಷಗಳು ಘಟನೆಯ ಕುರಿತು ಗಂಭೀರವಾಗಿ ವರ್ತಿಸದ ಸಂದರ್ಭದಲ್ಲಿ ಹೈಕೋರ್ಟ್‌ ನ್ಯಾಯಾಂಗದ ಕ್ರಿಯಾಶೀಲತೆಯನ್ನು ಪ್ರದರ್ಶಿಸಿದೆ. ತಕ್ಷಣವೇ ರಾಜ್ಯ ಸರ್ಕಾರ ತರಾತುರಿಯಲ್ಲಿ ನ್ಯಾ.ಬಿ.ಎ. ಪಾಟೀಲ್‌ ನೇತೃತ್ವದ ಆಯೋಗ ನೇಮಿಸಿದ್ದು ಯಾವ ಉದ್ದೇಶಕ್ಕೆ? ಹೈಕೋರ್ಟ್‌ ಸ್ವತಂತ್ರ ಸಮಿತಿ ನೇಮಿಸುವವರೆಗೂ ಕಾಯಬಹುದಿತ್ತಲ್ಲವೆ? ಈ ವಿಚಾರದಲ್ಲಿ ಆಡಳಿತ ವ್ಯವಸ್ಥೆಯ ಗಂಭೀರ ನಿರ್ಲಕ್ಷ್ಯವನ್ನು ಗಣನೆಗೆ ತೆಗೆದುಕೊಂಡು ಹೈಕೋರ್ಟ್‌ ವಿಚಾರಣೆ ಆರಂಭಿಸುತ್ತಿದ್ದಂತೆಯೇ ಸರ್ಕಾರ ಆಯೋಗ ರಚಿಸಿರುವುದು ಸಂಶಯಾಸ್ಪದ. ‘ಸರ್ಕಾರದ ಕಾರ್ಯವೈಖರಿ ಸರಿ ಇಲ್ಲ’ ಎಂದು ನ್ಯಾಯಾಲಯ ಹೇಳಿದ ಬಳಿಕ ಆಯೋಗ ನೇಮಿಸಿರುವುದು ಸರಿಯಲ್ಲ. ಹೈಕೋರ್ಟ್‌ ನೇಮಿಸಿದ ಸಮಿತಿಯೇ ತನಿಖೆ ನಡೆಸಬೇಕು.
-ಬಾನು ಮುಷ್ತಾಕ್‌, ವಕೀಲೆ ಮತ್ತು ಬರಹಗಾರ್ತಿ

ಬಿ.ಟಿ. ವೆಂಕಟೇಶ್‌, ಡಾ.ಎಚ್‌.ಸುದರ್ಶನ್‌, ಬಾನು ಮುಷ್ತಾಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.