ADVERTISEMENT

ಬೆತ್ತಲೆ ಮೆರವಣಿಗೆ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಗುಂಡ್ಲುಪೇಟೆ: ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 19:45 IST
Last Updated 27 ಜೂನ್ 2019, 19:45 IST
ಆರೋಪಿಗಳನ್ನು ಗುರುವಾರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು
ಆರೋಪಿಗಳನ್ನು ಗುರುವಾರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು   

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬೆಕಟ್ಟೆ ಶನೇಶ್ವರ ದೇವಸ್ಥಾನದಲ್ಲಿ ನಡೆದ ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ‌ದ, ಆರು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಜಿಲ್ಲಾ ಪ್ರಧಾನ ಮತ್ತುಸೆಷನ್ಸ್‌ ನ್ಯಾಯಾಲಯ ಜುಲೈ 11ರವರೆಗೆ ವಿಸ್ತರಿಸಿದೆ.ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿದೆ.

ನ್ಯಾಯಾಂಗ ಬಂಧನದ ಅವಧಿಗುರುವಾರಕ್ಕೆ ಕೊನೆಗೊಂಡಿದ್ದರಿಂದ ಆರೋಪಿಗಳಾದ ಶಿವಪ್ಪ, ಬಸವರಾಜು, ಮಾಣಿಕ್ಯ, ಸತೀಶ್, ಪುಟ್ಟಸ್ವಾಮಿ, ಚನ್ನಕೇಶವಮೂರ್ತಿ ಅವರನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಬಿ.ಬಸವರಾಜ ಅವರ ಮುಂದೆ ಪೊಲೀಸರು ಹಾಜರುಪಡಿಸಿದರು.

ಜಾಮೀನಿಗೆ ಆಕ್ಷೇಪ:ಆರೋಪಿಗಳ ಪರವಾಗಿ ಹಿರಿಯ ವಕೀಲ ಅರಳೀಕಟ್ಟೆ ಸಿದ್ದರಾಜು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಧೀಶರು ಇದೇ ಸಂದರ್ಭದಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜಾಮೀನು ನೀಡುವುದಕ್ಕೆ ಆಕ್ಷೇಪಣೆ ಸಲ್ಲಿಸಿದರು.

ADVERTISEMENT

ಆರೋಪಿಗಳ ಪರ ವಾದ ಮಂಡಿಸಿದ ಸಿದ್ದರಾಜು, ‘ಅಲ್ಲಿ ಬೆತ್ತಲೆ ಮೆರವಣಿಗೆ ನಡೆದಿಲ್ಲ. ದಲಿತ ಎಂಬ ಕಾರಣಕ್ಕೂ ಹಲ್ಲೆಯಾಗಿಲ್ಲ. ಆರೋಪಿಗಳ ಪೈಕಿ ಒಬ್ಬರು ದಲಿತ ಸಮುದಾಯಕ್ಕೆ ಸೇರಿದ್ದಾರೆ. ಜೂನ್‌ 2ರಂದು ಸಂತ್ರಸ್ತ ಪ‍್ರತಾಪ್‌ ಅವರನ್ನು ದರೋಡೆ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಆದರೆ, ದರೋಡೆಯ ಬಗ್ಗೆ ಇದುವರೆಗೆ ದೂರು ದಾಖಲಾಗಿಲ್ಲ’ ಎಂದರು.

‘ದೇವಸ್ಥಾನಕ್ಕೆ ಬರುವ ಮೊದಲೇ ಪ್ರತಾಪ್‌ ಬೆತ್ತಲೆಯಾಗಿದ್ದರು. ರಾಘವಾಪುರದ ಬಳಿ ಜಮೀನಿನಲ್ಲಿ ಅವರ ದ್ವಿಚಕ್ರ ವಾಹನ, ಬಟ್ಟೆಗಳೆಲ್ಲ ಸಿಕ್ಕಿವೆ. ಅವರನ್ನು ನಗ್ನ ಸ್ಥಿತಿಯಲ್ಲಿ ನೋಡಿದವರೂ ಇದ್ದಾರೆ’ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು.

‘ತಮ್ಮ ಮಗ ಬುದ್ಧಿಮಾಂದ್ಯ ಎಂದು ಪ್ರತಾಪ್‌ ತಂದೆ ಪೊಲೀಸ್‌ ಠಾಣೆಗೆ ಪ್ರಮಾಣಪತ್ರ ನೀಡಿದ್ದಾರೆ. ಜೂನ್‌ 3ರಂದು ಘಟನೆ ನಡೆದಿದ್ದರೂ 11ರಂದು ಪೊಲೀಸರಿಗೆ ದೂರು ನೀಡಲಾಗಿದೆ. ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಗಮನಿಸಿ ದೂರು ದಾಖಲಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ದೌರ್ಜನ್ಯ ತಡೆ ಕಾಯ್ದೆಯ ಕಲಂನಲ್ಲಿ ದಾಖಲಿಸಿದ ಪ್ರಕರಣ ಬಿಟ್ಟು, ಉಳಿದೆಲ್ಲ ಪ್ರಕರಣಗಳಲ್ಲಿ ಜಾಮೀನು ನೀಡಲು ಅವಕಾಶ ಇದೆ. ಹಾಗಾಗಿ, ಜಾಮೀನು ಮಂಜೂರು ಮಾಡಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ‍ಬ್ಲಿಕ್‌ ಪ್ರಾಸಿಕ್ಯೂಟರ್‌ ಲೋಲಾಕ್ಷಿ, ‘ಇಡೀ ಪ್ರಕರಣವೇಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ದಾಖಲಿಸಿದ ದೂರಿನಲ್ಲಿ ನಿಂತಿದೆ. ಆರೋಪಿಗಳು ಕ್ರೂರ ಕೃತ್ಯ ಎಸಗಿದ್ದಾರೆ’ ಎಂದು ಹೇಳಿದರು. ‘ದೂರು ನೀಡುವುದು ತಡವಾಗಿದ್ದೇಕೆ’ ಎಂಬ ನ್ಯಾಯಾಧೀಶರ ಪ್ರಶ್ನೆಗೆ, ‘ಸಂತ್ರಸ್ತ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ತಂದೆ– ತಾಯಿ ಬರುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ, ವಿಳಂಬವಾಯಿತು’ ಎಂದರು.

‘ಸನ್ಮಾನಿಸಿ ಗೌರವಿಸಬೇಕಿತ್ತು’

ವಕೀಲ ಸಿದ್ದರಾಜು ಅವರು, ‘ಸಂತ್ರಸ್ತ ವ್ಯಕ್ತಿ ನಗ್ನವಾಗಿದ್ದನ್ನು ಕಂಡು ಒಂದನೇ ಆರೋಪಿ ಅವರು ಜೈನಮುನಿ ಎಂದುಕೊಂಡಿದ್ದರು’ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘ಜೈನಮುನಿ ಎಂದುಕೊಂಡಿದ್ದರೆ, ಸನ್ಮಾನಿಸಿ ಗೌರವಿಸಬೇಕಿತ್ತು. ಬೆತ್ತಲೆ ಮೆರವಣಿಗೆ ಮಾಡುತ್ತಾರಾ’ ಎಂದು ಪ್ರಶ್ನಿಸಿದರು.

ಘಟನೆ ನಡೆದ ಜಾಗದಲ್ಲಿ ಪೊಲೀಸರು ಇದ್ದರು ಎಂದು ವಕೀಲರು ಹೇಳಿದಾಗ, ‘ಪೊಲೀಸರ ಎದುರೇ ಮೆರವಣಿಗೆ ಮಾಡಬಹುದೇ’ ಎಂದು ಮರುಪ್ರಶ್ನೆ ಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ‘ಮೆರವಣಿಗೆ ನಡೆದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.