ADVERTISEMENT

ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 14:50 IST
Last Updated 26 ಆಗಸ್ಟ್ 2025, 14:50 IST
<div class="paragraphs"><p>ಡಿ.ಕೆ ಶಿವಕುಮಾರ್</p></div>

ಡಿ.ಕೆ ಶಿವಕುಮಾರ್

   

ಬೆಂಗಳೂರು: ‘ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

‘ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಬೇಡ’ ಎಂದು ಬಿಜೆಪಿ ‌ನಾಯಕರು ವಿರೋಧ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ. ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ’ ಎಂದರು.

ADVERTISEMENT

‘ಮಸೀದಿ, ದರ್ಗಾಗಳಿಗೆ, ಜೈನರ ಬಸದಿಗಳಿಗೆ, ಚರ್ಚ್, ಗುರುದ್ವಾರಗಳಿಗೆ ನಾವು ಹೋಗುವುದನ್ನು ಯಾರಾದರೂ ತಡೆದಿದ್ದಾರೆಯೇ? ಹಿಂದೂ ದೇವಸ್ಥಾನಗಳಿಗೆ ಅವರುಗಳು ಬರುವುದನ್ನು ನಾವು ವಿರೋಧಿಸಿದ್ದೇವೆಯೇ? ಯಾವುದೇ ಶ್ರದ್ದಾ ಕೇಂದ್ರಗಳಿಗೆ ಯಾರು ಬೇಕಾದರೂ ಹೋಗಿ ಬರಬಹುದು’ ಎಂದು ಹೇಳಿದರು. 

‘ಎಷ್ಟೋ ಜನ ಹಿಂದೂಗಳು ಮುಸ್ಲಿಮರಾಗಿ, ಕ್ರಿಶ್ಚಿಯನ್ನರಾಗಿ ಹಾಗೂ ಬೇರೆ ಧರ್ಮದವರು ಹಿಂದೂಗಳಾಗಿ ಮತಾಂತರ ಆಗಿಲ್ಲವೇ? ಮುಸ್ಲಿಮರು ಹಿಂದೂ ಧರ್ಮದ ಆಚರಣೆಗಳನ್ನು ಮಾಡುತ್ತಿಲ್ಲವೇ? ಅಯೋಧ್ಯೆಯ ರಾಮನ ದರ್ಶನಕ್ಕೆ ಹಿಂದೂಗಳು ಮಾತ್ರ ಬರಬೇಕು ಎಂದು ಏಕೆ ಫಲಕ ಹಾಕಿಲ್ಲ? ಬಿಜೆಪಿ ಸರ್ಕಾರ ಇದ್ದ ವೇಳೆ ಹಾಗೂ ಈಗ ಇಡೀ ದೇಶದಲ್ಲಿ ಹಜ್ ಸಮಿತಿ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗಳನ್ನು ಏಕೆ ರದ್ದು ಮಾಡಲಿಲ್ಲ? ಇದೆಲ್ಲವೂ ರಾಜಕೀಯ’ ಎಂದು ತಿರುಗೇಟು ನೀಡಿದರು.

‘ನಮ್ಮ ಸಂವಿಧಾನದ ಮೂಲಕ ಎಲ್ಲರಿಗೂ ಅವಕಾಶ, ಸ್ವಾತಂತ್ರ್ಯ ಕಲ್ಪಿಸಲಾಗಿದೆ.‌ ಎಲ್ಲರಿಗೂ ಅವರವರ ನಂಬಿಕೆ ಮೇಲೆ ವಿಶ್ವಾಸವಿದೆ. ಮುಸ್ಲಿಂ ಅಥವಾ ಕ್ರಿಶ್ಚಿಯನ್ ಹೆಣ್ಣು, ಹಿಂದು ಅಥವಾ ಇತರೇ ಧರ್ಮದ ಗಂಡಿಗೆ ಜನಿಸಿದ ಮಕ್ಕಳು ತಮಗೆ ಬೇಕಾದ್ದನ್ನು ಅನುಸರಿಸುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.