ADVERTISEMENT

20ರಿಂದ ‘ಚಂದನ’ದಲ್ಲಿ ಸೇತುಬಂಧ ತರಗತಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 20:55 IST
Last Updated 13 ಜುಲೈ 2020, 20:55 IST

ಬೆಂಗಳೂರು: ‘8ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಕೋವಿಡ್ ಸಂದರ್ಭದಲ್ಲಿ ನಿರಂತರ ಕಲಿಕೆಗೆ ಅಡಚಣೆ ಆಗದಂತೆ ನೋಡಿಕೊಳ್ಳಲು ಇದೇ 20ರಿಂದ 20 ದಿನಗಳ ಸೇತುಬಂಧ ಕಾರ್ಯಕ್ರಮಗಳನ್ನು ‘ಚಂದನ’ ವಾಹಿನಿಯಲ್ಲಿ ಬಿತ್ತರಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದರು.

‘ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್‌, ಸಂಸ್ಕೃತ, ಉರ್ದು, ದ್ವಿತೀಯ ಭಾಷೆ ಇಂಗ್ಲಿಷ್, ತೃತೀಯ ಭಾಷೆ ಹಿಂದಿ ಹಾಗೂ ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳಲ್ಲಿ ಸೇತುಬಂಧ ಕಾರ್ಯಕ್ರಮಗಳು ಪ್ರಸಾರವಾಗಲಿವೆ’ ಎಂದು ಸೋಮವಾರ ಇಲ್ಲಿ ತಿಳಿಸಿದರು.

‘20 ದಿನಗಳ ಬಳಿಕ 8ರಿಂದ 10ನೇ ತರಗತಿಗಳಿಗೆ ಕನ್ನಡ ಮಾಧ್ಯಮದಲ್ಲಿ ದೈನಂದಿನ ಬೋಧನೆ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ 1ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ವಿಡಿಯೊ ಪಾಠಗಳನ್ನು ಪ್ರಸಾರ ಮಾಡಲಾಗುವುದು’ ಎಂದರು.

ADVERTISEMENT

‘ಶಿಕ್ಷಣ ಇಲಾಖೆಯ ಯುಟ್ಯೂಬ್ ವಾಹಿನಿಯಲ್ಲಿಯೂ ಈ ಎಲ್ಲಾ ತರಗತಿಗಳು ಲಭ್ಯ ಇರಲಿವೆ. ಈ ತರಗತಿಗಳ ಕಲಿಕೆಯ ಮೌಲ್ಯಮಾಪನ ಮಾಡಲು ಪ್ರತಿ 20 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರನ್ನು ಮ್ಯಾಪಿಂಗ್ ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.