ADVERTISEMENT

ತಾಂಡಾಗಳ ಜನರಿಗೆ ಚಂದರಗಿ ನೆರವು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 13:07 IST
Last Updated 30 ಮಾರ್ಚ್ 2020, 13:07 IST
ಬೆಳಗಾವಿಗೆ ತಾಂಡಾಗಳಿಂದ ಬಂದಿದ್ದವರಿಗೆ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ದಿನಸಿ ಪದಾರ್ಥ ನೀಡಿ ನೆರವಾದರು
ಬೆಳಗಾವಿಗೆ ತಾಂಡಾಗಳಿಂದ ಬಂದಿದ್ದವರಿಗೆ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ದಿನಸಿ ಪದಾರ್ಥ ನೀಡಿ ನೆರವಾದರು   

ಬೆಳಗಾವಿ: ಜಿಲ್ಲೆ ವಿವಿಧೆಡೆಯ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಅನೇಕ ಲಂಬಾಣಿ ತಾಂಡಾಗಳಿಂದ ನಗರಕ್ಕೆ ದುಡಿಯಲು ಬಂದಿರುವ ಹಾಗೂ ಲಾಕ್‌ಡೌನ್‌ನಿಂದ ಅತಂತ್ರವಾಗಿರುವ 25 ಕುಟುಂಬಗಳಿಗೆ ದಿನಸಿ ವಿತರಿಸಿ ನೆರವಾಗುವ ಮೂಲಕ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾನವೀಯತೆ ಮೆರೆದಿದ್ದಾರೆ.

‘ಶಾಹೂನಗರ, ಅಜಂ ನಗರ, ನೆಹರು ನಗರ ಮತ್ತು ವೈಭವ ನಗರಗಳಲ್ಲಿ ಈ ಜನರು ವಾಸವಾಗಿದ್ದಾರೆ. ಹಲವು ದಿನಗಳಿಂದ ಕೆಲಸವಿಲ್ಲದೆ ಗಳಿಕೆ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ನನ್ನನ್ನು ಮೂರ್ನಾಲ್ಕು ದಿನಗಳಿಂದ ಸಂಪರ್ಕಿಸಿದ ಆ ಕುಟುಂಬಗಳಿಗೆ ಅಕ್ಕಿ, ತೊಗರಿ ಬೇಳೆ, ಅಡುಗೆ ಎಣ್ಣೆ, ಬಟ್ಟೆ ತೊಳೆಯುವ ಸಾಬೂನು, ಸ್ನಾನದ ಸಾಬೂನು, ಸಾಸಿವೆ, ಜೀರಿಗೆ ಕೊಟ್ಟಿದ್ದೇನೆ. ಅವರ ಪ್ರಕಾರ 15 ದಿನಗಳವರೆಗೆ ಸಾಕಾಗಬಹುದು’ ಎನ್ನುತ್ತಾರೆ ಅವರು.

‘ಬಿಪಿಎಲ್ ಕಾರ್ಡ್‌ ಹೊಂದಿದವರಿಗೆ ಸರ್ಕಾರವೇ ಉಚಿತವಾಗಿ ಅಕ್ಕಿ ಅಥವಾ ಗೋಧಿ ಕೊಡಲಿದೆ. ಆದರೆ, ನಾನು ನೆರವಾದ ಕುಟುಂಬಗಳ ಬಳಿ ಬಿಪಿಎಲ್ ಕಾರ್ಡ್‌ಗಳಿಲ್ಲ. ಅವರ ತಾಂಡಾಗಳಲ್ಲಿವೆ. ಅವರು ಅಲ್ಲಿಗೆ ಹೋಗುವ ಸ್ಥಿತಿ ಇಲ್ಲ. ಸವದತ್ತಿಯ ಹಂಚಿನಾಳ, ರಾಮದುರ್ಗದ ಕಲ್ಮಡ ಮತ್ತು ಆರಿಬೆಂಚಿ, ಬಾಗಲಕೋಟೆಯ ಶಿರೂರು ತಾಂಡಾಗಳಿಗೆ ಸೇರಿದ ಈ ಕುಟುಂಬಗಳು ತಮ್ಮ ಭವಿಷ್ಯದ ಬಗ್ಗೆ ಚಿಂತೆಗೀಡಾಗಿವೆ. ನೀವು ಕೊಟ್ಟಿದ್ದು 15 ದಿನಗಳಿಗೆ ಸಾಕಾಗಬಹುದು. ಮುಂದೇನು’ ಎನ್ನುವುದು ಅವರ ಚಿಂತೆಯಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

‘ಜಿಲ್ಲಾಡಳಿತ ಇಂಥವರ ನೆರವಿಗೆ ಬರಬೇಕು’ ಎನ್ನುವುದು ಅವರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.