ಬೆಂಗಳೂರು: ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಸರಗಳವು ಮಾಡಿದ್ದ ಆರೋಪದಡಿಹರೀಶ್ ಹಾಗೂ ಆಕೆಯ ಪ್ರೇಯಸಿಯನ್ನು ಪೊಲೀಸರು ಬಂಧಿಸಿದ್ದಾರೆ.
‘ದೊಡ್ಡ ಆಲದಮರದ ರಾಮೋಹಳ್ಳಿ ನಿವಾಸಿಗಳಾದ ಆರೋಪಿಗಳು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಠಾಣೆ ವ್ಯಾಪ್ತಿಯಲ್ಲಿ ನ. 23ರಂದು ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರ ಸರಗಳವು ಮಾಡಿ ಪರಾರಿಯಾಗಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಿಂದಲೇ ಅವರಿಬ್ಬರು ಸಿಕ್ಕಿಬಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಹರೀಶ್ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಕೆಲಸಕ್ಕೆ ಹೋದರೆ ಮಾತ್ರ ಯುವತಿಯನ್ನು ಮದುವೆ ಮಾಡಿಕೊಡುವುದಾಗಿ ಆಕೆಯ ಮನೆಯವರು ಹೇಳಿದ್ದರು. ಕೆಲಸ ಹುಡುಕಲು ನಗರಕ್ಕೆ ಬರುತ್ತಿದ್ದ ಹರೀಶ್, ಸರಗಳವು ಮಾಡಲಾರಂಭಿಸಿದ್ದ.’
‘ಪ್ರಿಯಕರ ಸರಗಳವು ಮಾಡುತ್ತಿದ್ದ ವಿಷಯ ಪ್ರೇಯಸಿಗೂ ಗೊತ್ತಾಗಿತ್ತು. ಹಣ ಸಂಪಾದನೆ ಮಾಡಿದರೆ ಮದುವೆಗೆ ಹಾಗೂ ನಂತರದ ಜೀವನಕ್ಕೆ ಅನುಕೂಲವಾಗುತ್ತದೆಂದು ತಿಳಿದ ಆಕೆಯೂ ಕೃತ್ಯಕ್ಕೆ ಸಹಕಾರ ನೀಡಲಾರಂಭಿಸಿದ್ದಳು’ ಎಂದು ಅಧಿಕಾರಿ ಹೇಳಿದರು.
ದ್ವಿಚಕ್ರ ವಾಹನದಲ್ಲಿ ಬಂದು ಕೃತ್ಯ: ‘23 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ನಾಗರಬಾವಿ ವಿಲೇಜ್‌ನ ಐಸೆಕ್ ಮುಖ್ಯರಸ್ತೆಯಲ್ಲಿ ನವೆಂಬರ್ 23ರಂದು ರಾತ್ರಿ 8ರ ಸುಮಾರಿಗೆ ನಡೆದುಕೊಂಡು ಹೊರಟಿದ್ದರು. ಟಿವಿಎಸ್ ಜ್ಯುಪಿಟರ್ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಗಳು 35 ಸಾವಿರ ಮೌಲ್ಯದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.
‘ಘಟನೆ ಸಂಬಂಧ ದೂರು ನೀಡಿದ್ದ ವಿದ್ಯಾರ್ಥಿನಿ, ಯುವಕ ಹಾಗೂ ಯುವತಿ ಒಟ್ಟಿಗೆ ದ್ವಿಚಕ್ರ ವಾಹನದಲ್ಲಿ ಬಂದು ಕೃತ್ಯ ಎಸಗಿರುವುದಾಗಿ ಹೇಳಿದ್ದರು. ಅದು ಸಹ ಆರೋಪಿಗಳನ್ನು ಬಂಧಿಸಲು ನೆರವಾಯಿತು. ಇವರಿಬ್ಬರು ಠಾಣೆ ವ್ಯಾಪ್ತಿಯ ಎರಡು ಕಡೆಗಳಲ್ಲಿ ಸರಗಳವು ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಸದ್ಯ ₹1.52 ಲಕ್ಷ ಮೌಲ್ಯದ46 ಗ್ರಾಂ ತೂಕದ 2 ಚಿನ್ನದ ಸರಗಳನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.