ADVERTISEMENT

ಡಬ್ಬಿಂಗ್‌ ಇರಲಿ: ಚಂದ್ರಶೇಖರ ಕಂಬಾರ

ಮನೋಜ ಕುಮಾರ್ ಗುದ್ದಿ
Published 5 ಫೆಬ್ರುವರಿ 2020, 19:30 IST
Last Updated 5 ಫೆಬ್ರುವರಿ 2020, 19:30 IST
ಚಂದ್ರಶೇಖರ ಕಂಬಾರ (ಪ್ರಜಾವಾಣಿ ಸಂಗ್ರಹ ಚಿತ್ರ)
ಚಂದ್ರಶೇಖರ ಕಂಬಾರ (ಪ್ರಜಾವಾಣಿ ಸಂಗ್ರಹ ಚಿತ್ರ)   

ಕಲಬುರ್ಗಿ: ‘ತಂತ್ರಾಂಶ ಬೆಳವಣಿಗೆ ಹೊಂದದಿದ್ದರೆ ಆ ಭಾಷೆ ಬದುಕಲ್ಲ. ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು. ಡಬ್ಬಿಂಗ್‌ ಬೇಡ ಎಂದು ಕನ್ನಡ ಚಿತ್ರರಂಗದವರು ಹೇಳುತ್ತಿದ್ದರೂ ಇಂಗ್ಲಿಷ್‌ ಸೇರಿದಂತೆ ವಿವಿಧ ಭಾಷೆಗಳಲ್ಲಿ ಅಂತರ
ರಾಷ್ಟ್ರೀಯ ಮಟ್ಟದ ಚಾನೆಲ್‌ಗಳಲ್ಲಿ ಬರುವ ಜ್ಞಾನ ಕನ್ನಡಿಗರಿಗೂ ಸಿಗುವಂತಾಗಬೇಕು’ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಪ್ರತಿಪಾದಿಸಿದರು.

ಸಮ್ಮೇಳನದ ಅಧ್ಯಕ್ಷ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅವರಿಗೆ ಪರಿಷತ್ತಿನ ಧ್ವಜ ಹಸ್ತಾಂತರಿಸಿ ಅವರು ಮಾತನಾಡಿದರು.‌

‘ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಅನುದಾನ ಕೋರಿ ಹಲವು ಸಚಿವರಿಗೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಕನ್ನಡ ತಂತ್ರಾಂಶದ ಅಭಿವೃದ್ಧಿಗೆಹಿಂದೆ ಅನುದಾನ ನೀಡಿದ್ದು ಬಿ.ಎಸ್‌.ಯಡಿಯೂರಪ್ಪ. ನಮ್ಮ ಸುದೈವದಿಂದ ನೀವು ಮುಖ್ಯಮಂತ್ರಿ ಆಗಿದ್ದೀರಿ. ಈಗಲೂ ಇದಕ್ಕೆ ಒತ್ತು ನೀಡಿ’ ಎಂದು ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಅವರನ್ನು ಕೋರಿದರು.

ADVERTISEMENT

‘ಇಂಗ್ಲಿಷ್‌ ಚಾನೆಲ್‌ಗಳಾದ ಡಿಸ್ಕವರಿ, ಅನಿಮಲ್‌ ಪ್ಲಾನೆಟ್‌ನಲ್ಲಿ ವಿಶ್ವದ ಜ್ಞಾನ ಲಭ್ಯವಾಗುತ್ತದೆ. ಇದೇ ಕಾರ್ಯಕ್ರಮಗಳ ಅನುವಾದಿತ ಪ್ರಸಾರವು ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಆಗುತ್ತವೆ. ವಿವಿಧ ಭಾಷೆಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಚಾನೆಲ್‌ಗಳಲ್ಲಿ ಬರುವ ಜ್ಞಾನ ಕನ್ನಡಿಗರಿಗೂ ಸಿಗುವಂತಾಗಬೇಕು. ಈ ಕಾರ್ಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ನೆರವು ನೀಡಬೇಕು’ ಎಂದು ಇಲಾಖೆಯ ಸಚಿವ ಸಿ.ಟಿ. ರವಿ ಅವರಿಗೆ ಸಲಹೆ ನೀಡಿದರು.

‘ಭಾರತವು ಬಹು ಸಂಸ್ಕೃತಿಗಳನ್ನು ಹೊಂದಿಯೂ ಒಗ್ಗಟ್ಟನ್ನು ತನ್ನ ಅಸ್ಮಿತೆಯನ್ನಾಗಿಸಿಕೊಂಡಿದೆ. ಇದನ್ನು ಅರಿತ ಮೆಕಾಲೆ, ಇಲ್ಲಿನ ಜನರನ್ನು ಒಡೆಯಬೇಕೆಂದರೆ ಇಂಗ್ಲಿಷ್‌ ಭಾಷೆಯನ್ನು ಕಲಿಸಬೇಕು. ಆ ಬಳಿಕ ಅವರು ಕೀಳರಿಮೆಯಿಂದ ಬಳಲುತ್ತಾರೆ. ಆಗ ಜನರ ಸಂಸ್ಕೃತಿಯನ್ನು ನಾಶ ಮಾಡಬಹುದು ಎಂದುಬ್ರಿಟನ್‌ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದ. ಅದಕ್ಕೆ ತಕ್ಕಂತೆ 18ನೇ ಶತಮಾನದಲ್ಲಿ ಇಲ್ಲಿ ಇಂಗ್ಲಿಷ್‌ ಕಲಿಕೆ ಆರಂಭವಾದಾಗ ಜನರು ರೋಮಾಂಚನಗೊಂಡರು. ನಮ್ಮಲ್ಲಿನ ಜಾತಿ ವ್ಯವಸ್ಥೆ, 12 ಬಗೆಯ ಕ್ಯಾಲೆಂಡರ್‌ಗಳ ಕಾಲಮಾನ ಮುಕ್ಕೋಟಿ ದೇವತೆಗಳು ಇರುವ ಬಗ್ಗೆ ಪ್ರಶ್ನಿಸಿದಾಗ ಅದನ್ನು ನಮ್ಮವರು ಒಪ್ಪಿಕೊಂಡರು. ಆಗ ಅವರು ನಮ್ಮನ್ನು ಜಾತಿ, ಧರ್ಮದ ಮೇಲೆ ಒಡೆಯಲು ಆರಂಭಿಸಿದರು’ ಎಂದರು.

‘ಕಲಬುರ್ಗಿ ಸೀಮೆಯು ಮೊದಲಿನಿಂದಲೂ ಭಾವೈಕ್ಯ ಸಂಸ್ಕೃತಿಗೆ ಹೆಸರುವಾಸಿ. 14–15ನೇ ಶತಮಾನದಲ್ಲಿ ಬಂದಾನವಾಜರು, ಸಾವಳಗಿ ಸಿದ್ಧಲಿಂಗೇಶ್ವರರು ಇಲ್ಲಿನ ಜನಮಾನಸದಲ್ಲಿ ನೆಲೆಸಿದ್ದರು. ರಾಷ್ಟ್ರಕೂಟ ಅರಸ ಅಮೋಘವರ್ಷ ನೃಪತುಂಗ
ಸ್ವತಃ ಮೇಧಾವಿಯಾಗಿದ್ದ. ಅನಕ್ಷರಸ್ಥ ಜನಗಳ ಬಗ್ಗೆ ಬಹಳ ಹೆಮ್ಮೆಯಿಂದ ಮಾತನಾಡುತ್ತಿದ್ದ. ಇಲ್ಲಿನ ಜನರು ಎಂಥವ
ರೆಂದರೆ ಕುಳಿತು ಓದದೆಯೇ ಕಾವ್ಯ ಪ್ರಯೋಗ ಮಾಡುವಷ್ಟು ಪರಿಣತಿ ಹೊಂದಿದ್ದರು ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾನೆ’ ಎಂಬುದಾಗಿ ಕಂಬಾರ ಸ್ಮರಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.