ADVERTISEMENT

ಚಂಗಡಿ ಗ್ರಾಮ ತೊರೆಯಲು ಗ್ರಾಮಸ್ಥರ ನಿರ್ಧಾರ

ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಗೆ ಬರುವ ಗ್ರಾಮ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2018, 19:25 IST
Last Updated 2 ಡಿಸೆಂಬರ್ 2018, 19:25 IST
ಹನೂರು ಪಟ್ಟಣದಲ್ಲಿ ಭಾನುವಾರ ಚಂಗಡಿ ಗ್ರಾಮಸ್ಥರು ಸಭೆ ನಡೆಸಿದರು
ಹನೂರು ಪಟ್ಟಣದಲ್ಲಿ ಭಾನುವಾರ ಚಂಗಡಿ ಗ್ರಾಮಸ್ಥರು ಸಭೆ ನಡೆಸಿದರು   

ಹನೂರು: ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಯ ಚಂಗಡಿ ಗ್ರಾಮವನ್ನು ತೊರೆಯಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಪಟ್ಟಣದ ಆರ್.ಎಂ.ಸಿ ಆವರಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಗ್ರಾಮದ ಮುಖಂಡರು ಈ ನಿರ್ಧಾರ ಪ್ರಕಟಿಸಿದರು.

‘ಗ್ರಾಮವು ಶಿಕ್ಷಣ, ಆರೋಗ್ಯ, ರಸ್ತೆ ಸೇರಿದಂತೆ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಹೀಗಾಗಿ, ನಾವೇ ಸ್ವಯಂಪ್ರೇರಿತರಾಗಿ ಗ್ರಾಮ ತೊರೆಯಲು ಸಿದ್ಧರಿದ್ದೇವೆ. ಅಧಿಕಾರಿಗಳು ಯಾರ ಮಾತಿಗೂ ಕಿವಿಗೊಡಬಾರದು. ಬದಲಾಗಿ ಪುನರ್ವಸತಿ ಕಲ್ಪಿಸಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದರು.

ADVERTISEMENT

‘ಗ್ರಾಮದ 150 ಕುಟುಂಬಗಳು ಪುನರ್ವಸತಿಗಾಗಿ ದಾಖಲೆ ಸಮೇತ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿವೆ. ಕೆಲವರು ಮುಗ್ಧ ಜನರನ್ನು ದಿಕ್ಕು ತಪ್ಪಿಸಿ, ಅಧಿಕಾರಿಗಳಿಗೆ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ. ನ.16ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲು ಅವರ ನೇತೃತ್ವದಲ್ಲಿ ಗ್ರಾಮದಲ್ಲಿ ಸಭೆ ನಡೆದಿತ್ತು. ಆಗ, ಪುನರ್ವಸತಿಗೆ ಸಮ್ಮತಿ ಸೂಚಿಸಿದ್ದೆವು. ಅದರಂತೆ ಪ್ರತಿ ಕುಟುಂಬಕ್ಕೆ ₹ 15 ಲಕ್ಷ ಅಥವಾ ಮನೆ ಹಾಗೂ 3 ಎಕರೆ ಜಮೀನು ನೀಡಲು ಅರಣ್ಯ ಇಲಾಖೆ ಭರವಸೆ ನೀಡಿದೆ’ ಎಂದು ಗ್ರಾಮದ ಮುಖಂಡ ಕರಿಯಪ್ಪ ಹೇಳಿದರು.

ಪುನರ್ವಸತಿಗೆ ಕ್ರಮ: ‘ಚಂಗಡಿ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಗ್ರಾಮ ತೊರೆಯಲು ನಿರ್ಧರಿಸಿ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಸರ್ಕಾರಕ್ಕೂ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.