ADVERTISEMENT

ಕಸಾಪ ಘನತೆ ಹಾದಿಬೀದಿಯ ಸರಕಾಗದಿರಲಿ: ಸಾಹಿತಿ ಗೊ.ರು.ಚನ್ನಬಸಪ್ಪ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 13:36 IST
Last Updated 24 ಆಗಸ್ಟ್ 2025, 13:36 IST
   

ಮಂಡ್ಯ: ‘ಕನ್ನಡ ಸಾಹಿತ್ಯ ಪರಿಷತ್ತು ಗೊಂದಲದ ಗೂಡಾಗಬಾರದು, ಅದರ ಘನತೆ–ಗಾಂಭೀರ್ಯಗಳು ಹಾದಿ–ಬೀದಿಯಲ್ಲಿ ಚೆಲ್ಲಾಡುವ ಸರಕುಗಳಾಗಬಾರದು. ಪಾವಿತ್ರ್ಯ, ಪರಂಪರೆ, ಪ್ರಾಮುಖ್ಯತೆಗೆ ಕಳಂಕಬಾರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ’ ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದರು. 

ನಗರದ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಬೆಲ್ಲದಾರತಿ’ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

87ನೇ ನುಡಿಜಾತ್ರೆಯ ನಂತರ ಪರಿಷತ್ತಿಗೆ ಸಂಬಂಧಿಸಿದಂತೆ ಆಗಿರುವ ಬೆಳವಣಿಗೆಯಿಂದ ನಾನು ನಿಜಕ್ಕೂ ನೊಂದುಕೊಂಡಿದ್ದೇನೆ. ಪರಿಷತ್ತು ಕೇವಲ ಕನ್ನಡದ ನುಡಿದೇಗುಲ ಮಾತ್ರವಲ್ಲ, ಕನ್ನಡಿಗರ ನಡೆದೇಗುಲವೂ ಆಗಿದೆ. ಕಾರ್ಯಭಾರದ ಹೊಣೆ ಹೊತ್ತಿರುವ ಅದರ ಪದಾಧಿಕಾರಿಗಳು ಅತ್ಯಂತ ಎಚ್ಚರವಹಿಸಬೇಕು. ಪದಾಧಿಕಾರಿಗಳಿಗೆ ದೊರೆತಿರುವುದು ಅಧಿಕಾರವಲ್ಲ, ಕನ್ನಡದ ಸೇವೆ ಸಲ್ಲಿಸುವ ದೊಡ್ಡ ಅವಕಾಶ. ಅಲ್ಲಿ ವ್ಯಕ್ತಿಪ್ರತಿಷ್ಠೆ, ಯುಕ್ತಿಜಾಡ್ಯ ಮತ್ತು ಶಕ್ತಿ ಪ್ರದರ್ಶನಗಳಿಗೆ ಅವಕಾಶವಿರಬಾರದು ಎಂದು ಹೇಳುವ ಮೂಲಕ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರ ಹೆಸರು ಹೇಳದೇ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. 

ADVERTISEMENT

ಪರಿಷತ್ತಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಉಂಟಾಗಿರುವ ವಿವಾದ ಮತ್ತು ಸರ್ಕಾರ ವಿಚಾರಣೆ ನಡೆಸಬೇಕಾಗಿ ಬರುವ ಹಂತ ತಲುಪಿದ್ದೇ ಒಂದು ವಿಷಾದಕರ ಬೆಳವಣಿಗೆ. ಆದಷ್ಟು ಬೇಗ ಈ ವಿಚಾರಣೆ ಮುಗಿಸಿ, ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು. 

ನವಗ್ರಹಗಳು ಕಾಡುತ್ತಿವೆ:

ನಮ್ಮ ದೇಶವನ್ನು ನವಗ್ರಹಗಳು ಕಾಡುತ್ತಿವೆ. ಇವು ಶಾಸ್ತ್ರ–ಪುರಾಣಗಳಲ್ಲಿ ಬರುವಂಥವಲ್ಲ, ಆಧುನಿಕರೆನ್ನುವ ನಾವೇ ನಮ್ಮ ವಿಕೃತ ಮನಸ್ಸುಗಳಿಂದ ಸೃಷ್ಟಿಸಿದಂಥವು. ಅವೆಂದರೆ, ವ್ಯಕ್ತಿಚಾರಿತ್ರ್ಯದ ದಾರಿದ್ರ್ಯ, ಜಾಗತೀಕರಣದ ಜೂಜು, ಹಣ ಮತ್ತು ಅಧಿಕಾರದ ಹುಚ್ಚು, ಬುದ್ಧಿಜೀವಿಗಳ ಮೂರ್ಖತನ, ನೈಸರ್ಗಿಕ ಸಂಪತ್ತಿನ ದುರ್ಬಳಕೆ, ಮತಾಂಧತೆಯ ಮತಿಹೀನತೆ, ರಾಜಕೀಯ ವ್ಯವಸ್ಥೆಯ ಅನಾಯಕತ್ವ, ಧರ್ಮದ ಅಪವ್ಯಾಖ್ಯಾನ ಮತ್ತು ಆಧ್ಯಾತ್ಮಿಕತೆಯ ಅಭಾವ ಎಂದರು. 

ಈ ಅನಿಷ್ಟ ನವಗ್ರಹಗಳ ಹಾವಳಿಯಲ್ಲಿ ನಮ್ಮ ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸ್ವಾರ್ಥದ ಸಿಕ್ಕು, ಸ್ಥಾನದ ಸೊಕ್ಕು, ಸೇಡಿನ ಹಠ, ಅಸಹಿಷ್ಣುತೆ, ಭಯೋತ್ಪಾದನೆ, ಭ್ರಷ್ಟಾಚಾರ, ಲೈಂಗಿಕ ಲಾಲಸೆ, ವಿಶ್ವಾಸದ್ರೋಹ ಇತ್ಯಾದಿ ಅವಗುಣಗಳೆಲ್ಲ ತುಂಬಿಕೊಂಡು ಬಿಟ್ಟಿವೆ. ನಮ್ಮ ಬದುಕು ಬಾಹ್ಯ ಸನ್ನಿವೇಶದ ಸುಳಿಗೆ ಸಿಲುಕಿ, ನೆಮ್ಮದಿ ಎನ್ನುವುದು ಬರಿಯ ಭ್ರಮೆಯಾಗಿದೆ ಎಂದು ವಿಷಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.