ADVERTISEMENT

ಚಾರ್ಮಾಡಿ ಘಾಟಿಯಲ್ಲಿ ಭೂ ಕುಸಿತ

ದಕ್ಷಿಣ ಕನ್ನಡ, ಉಡುಪಿಯಲ್ಲಿ ರೆಡ್‌ ಅಲರ್ಟ್‌ ಘೋಷಣೆ, ದೇಗುಲದಲ್ಲಿ ಸಿಕ್ಕವರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 5:37 IST
Last Updated 7 ಆಗಸ್ಟ್ 2019, 5:37 IST
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕಲ್ಹತ್ತಿಗಿರಿ ಜಲಪಾತದ ಅಂಗಳದಲ್ಲಿನ ವೀರಭದ್ರೇಶ್ವರ ಸ್ವಾಮಿ ದೇಗುಲದಲ್ಲಿ ಸಿಲುಕಿಕೊಂಡಿದ್ದವರು
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕಲ್ಹತ್ತಿಗಿರಿ ಜಲಪಾತದ ಅಂಗಳದಲ್ಲಿನ ವೀರಭದ್ರೇಶ್ವರ ಸ್ವಾಮಿ ದೇಗುಲದಲ್ಲಿ ಸಿಲುಕಿಕೊಂಡಿದ್ದವರು   

ಮಂಗಳೂರು/ ಚಿಕ್ಕಮಗಳೂರು: ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದೇ 7 ಮತ್ತು 8 ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಕಡಲಿನಲ್ಲಿ ತೂಫಾನ್ ಏಳುವ ಸಾಧ್ಯತೆ ಇದ್ದು ಕಡಲಿಗೆ ಮೀನುಗಾರಿಕೆಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಗರಿಷ್ಠ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ವಿಪರೀತ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ 2, 3 ಹಾಗೂ 7 ನೇ ತಿರುವಿನಲ್ಲಿ ಭೂಕುಸಿತ ಉಂಟಾಗಿದೆ. ಏಳನೇ ತಿರುವಿನ ಬಳಿ ಎರಡು ಮರಗಳು ರಸ್ತೆಗೆ ಉರುಳಿದ್ದರಿಂದ ಎರಡು ಗಂಟೆ ಸಂಚಾರ ಸ್ಥಗಿತಗೊಂಡಿತ್ತು. ಉಳ್ಳಾಲ ಮತ್ತು ಸೋಮೇಶ್ವರ ವ್ಯಾಪ್ತಿಯ ಉಚ್ಚಿಲ ಬಟ್ಟಪ್ಪಾಡಿ, ನ್ಯೂ ಉಚ್ಚಿಲ, ಉಳ್ಳಾಲದ ಕಿಲೇರಿಯಾನಗರ, ಕೈಕೋ, ಮುಕ್ಕಚ್ಚೇರಿಯಲ್ಲಿ ಕಡಲ್ಕೊರೆತ ತೀವ್ರವಾಗಿದೆ.

ADVERTISEMENT

ಸಂಪರ್ಕ ಕಡಿತ: ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಸುರಂಬಡ್ಕ ಕಿಂಡಿ ಅಣೆಕಟ್ಟು ಸಂಪೂರ್ಣವಾಗಿ ಮುಳುಗಡೆಯಾಗಿದೆ. ಹೆಬ್ರಿ ಸಮೀಪದ ಬಂಡಿಮಠ ಬಳಿ ಸೀತಾನದಿ ಉಕ್ಕಿ ಹರಿಯುತ್ತಿದ್ದು, ಉಡುಪಿ - ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿದುಕೊಂಡಿದೆ.

ರೈಲು ಸಂಚಾರ ವ್ಯತ್ಯಯ: ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಮರ ಬಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಭೂ ಕುಸಿತದಿಂದಾಗಿ ಕಾರವಾರ–ಯಶವಂತಪುರ ರೈಲನ್ನು ಹಾಸನ ಮತ್ತು ಮಂಗಳೂರು ಮಾರ್ಗಮಧ್ಯೆ ರದ್ದುಪಡಿಸಲಾಗಿದೆ.

ದೇಗುಲದಲ್ಲಿ ಸಿಲುಕಿದ್ದ 40 ಮಂದಿಯ ರಕ್ಷಣೆ

ಚಿಕ್ಕಮಗಳೂರು: ಮಳೆಯ ಆರ್ಭಟಕ್ಕೆ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕಲ್ಹತ್ತಿಗಿರಿ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದ್ದು, ಜಲಪಾತದ ಅಂಗಳದ ವೀರಭದ್ರೇಶ್ವರ ಸ್ವಾಮಿ ದೇಗುಲದಲ್ಲಿ ಸಿಲುಕಿಕೊಂಡಿದ್ದ ಸುಮಾರು 40 ಪ್ರವಾಸಿಗರನ್ನು ಪೊಲೀಸರು, ಸ್ಥಳೀಯರು ಮಂಗಳವಾರ ಹಗ್ಗದ ನೆರವಿನಿಂದ ಪಾರು ಮಾಡಿದ್ದಾರೆ.

‘ಮಧ್ಯಾಹ್ನ 1.30ರಿಂದ ಸುಮಾರು 2 ಗಂಟೆ ಕಾರ್ಯಾಚರಣೆ ಮಾಡಿದೆವು. ಸ್ಥಳೀಯ ಆಟೊ ಚಾಲಕರು ನೆರವಾದರು. ಎಲ್ಲರನ್ನು ಸುರಕ್ಷಿತವಾಗಿ ಕರೆತರಲಾಗಿದೆ’ ಎಂದು ಲಿಂಗದಹಳ್ಳಿ ಠಾಣೆ ಪಿಎಸ್ಐ ಬಸವರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.