ADVERTISEMENT

‘ಜಾಹೀರಾತು ನೋಡಿ ಹಣ ಗಳಿಸಿ’ ಆಮಿಷ: ₹ 3.5 ಕೋಟಿ ‘ಲೈಫ್‌ಸ್ಟೈಲ್’ ವಂಚನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 1:14 IST
Last Updated 6 ಜೂನ್ 2021, 1:14 IST
ಜಾನಿ
ಜಾನಿ   

ಬೆಂಗಳೂರು: ‘ಜಾಹೀರಾತು ನೋಡಿ ಹಣ ಗಳಿಸಿ' ಎಂಬ ಆಮಿಷವೊಡ್ಡಿ ಸದಸ್ಯತ್ವದ ಹೆಸರಿನಲ್ಲಿ ಜನರಿಂದ ಹಣ ಸಂಗ್ರಹಿಸಿ ವಂಚಿಸಿದ್ದ ಆರೋಪದಡಿ ‘ಜೆಎಎ ಲೈಫ್ ಸ್ಟೈಲ್ ಇಂಡಿಯಾ’ ಕಂಪನಿ ನಿರ್ದೇಶಕ ಕೆ.ವಿ. ಜಾನಿ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಕೇರಳದ ಎರ್ನಾಕುಲಂ ಜಿಲ್ಲೆಯ ಜಾನಿ, ಮಾಜಿ ಸೈನಿಕ. ಆರು ತಿಂಗಳ ಹಿಂದಷ್ಟೇ ಪತ್ನಿ ಜೊತೆ ನಗರಕ್ಕೆ ಬಂದು ಬಸವೇಶ್ವರನಗರದ ಪಶ್ಚಿಮ ಕಾರ್ಡ್ ರಸ್ತೆ ಬಳಿ ವಾಸವಿದ್ದರು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ಬಸವೇಶ್ವರನಗರ 2ನೇ ಹಂತದ 80 ಅಡಿ ರಸ್ತೆಯಲ್ಲಿ ‘ಜೆಎಎ ಲೈಫ್ ಸ್ಟೈಲ್ ಇಂಡಿಯಾ’ ಕಂಪನಿ ಕಚೇರಿ ತೆರೆದಿದ್ದ ಆರೋಪಿ, ಜನರನ್ನು ವಂಚಿಸುತ್ತಿದ್ದರು. ಪತ್ನಿ ಕಂಪನಿಯ ನಿರ್ದೇಶಕಿ ಆಗಿದ್ದರು. ವಂಚನೆ ಬಗ್ಗೆ ಸಾರ್ವಜನಿಕರೊಬ್ಬರು ಇತ್ತೀಚೆಗೆ ಮಾಹಿತಿ ನೀಡಿದ್ದರು. ಕಂಪನಿ ಕಚೇರಿ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.

ADVERTISEMENT

₹ 3.50 ಕೋಟಿ ಜಪ್ತಿ: ‘ಜೆಎಎ ಲೈಫ್ ಸ್ಟೈಲ್ ಹೆಸರಿನ ಜಾಲತಾಣದ ಮೂಲಕ ಆರೋಪಿ‌ ವಹಿವಾಟು ನಡೆಸುತ್ತಿದ್ದ. ಕಂಪನಿ ಸದಸ್ಯತ್ವಕ್ಕೆಂದು ₹ 1,109 ಪಡೆಯುತ್ತಿದ್ದ’ ಎಂದು ಹೇಳಿದ್ದಾರೆ.

‘ಸಮಯ ಸಿಕ್ಕಾಗಲೆಲ್ಲ ಅರ್ಧ ಗಂಟೆ ಜಾಹೀರಾತು ನೋಡಿದರೆ, ದಿನಕ್ಕೆ ₹ 240 ಸಿಗುತ್ತದೆ ಎಂಬುದಾಗಿಯೂ ಆರೋಪಿ ಹೇಳುತ್ತಿದ್ದ’ ಎಂದೂ ಅಧಿಕಾರಿ ಹೇಳಿದರು.

‘ನಿತ್ಯವೂ ಜಾಹೀರಾತು ವಿಡಿಯೊ ನೋಡಿದರೆ, ಪ್ರತಿ ತಿಂಗಳು ₹ 7,200ರಿಂದ ₹ 86,400ರವರೆಗೂ ಹಣ ಸಂಪಾದಿಸಹುದು. ಹಣವೂ ಆನ್‌ಲೈನ್ ಮೂಲಕವೇ ಖಾತೆಗೆ ಜಮೆ ಆಗುವುದೆಂದು ಆರೋಪಿ ಹೇಳುತ್ತಿದ್ದ. ಆತನ ಮಾತು ನಂಬಿದ್ದ 4 ಲಕ್ಷ ಮಂದಿ ಸದಸ್ಯತ್ವ ಪಡೆದಿದ್ದರು.’

‘ಆರು ತಿಂಗಳಿನಲ್ಲೇ ₹ 4 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿದ್ದ ಆರೋಪಿ, ಅದರಲ್ಲಿ ₹3.50 ಕೋಟಿಯನ್ನು ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಿದ್ದರು. ಹಣದ ಸಮೇತ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಉಳಿದ ಹಣವನ್ನು ಬೇರೆಗೆ ಹೂಡಿಕೆ ಮಾಡಿರುವುದಾಗಿ ಆರೋಪಿ ಹೇಳುತ್ತಿದ್ದಾರೆ’ ಎಂದೂ ಅಧಿಕಾರಿ ಹೇಳಿದರು.

‘ವಂಚನೆ ಉದ್ದೇಶದಿಂದಲೇ ಆರೋಪಿ ಕಂಪನಿ ತೆರೆದಿರುವುದು ಗೊತ್ತಾಗುತ್ತಿದೆ. ಇನ್ನೊಂದು ಮೂರು ತಿಂಗಳು ಹಣ ಸಂಗ್ರಹಿಸಿ, ಕಂಪನಿ ಕಚೇರಿಗೆ ಬೀಗ ಹಾಕಿಕೊಂಡು ನಗರದಿಂದ ಪರಾರಿಯಾಗಲು ಆರೋಪಿ ಸಂಚು ರೂಪಿಸಿದ್ದ ಮಾಹಿತಿಯೂ ಸಿಕ್ಕಿದೆ’ ಎಂದು ಅಧಿಕಾರಿ ತಿಳಿಸಿದರು.

‘ಅಮೆರಿಕದ ಕಂಪನಿ ಜತೆ ಒಪ್ಪಂದ!’
‘ಜಾಹೀರಾತು ನೋಡಿದರೆ ಹಣ ನೀಡುವ ಅಮೆರಿಕದ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳುತ್ತಿದ್ದ ಜಾನಿ, ಆ ಬಗ್ಗೆ ಜಾಹೀರಾತುಗಳನ್ನೂ ನೀಡುತ್ತಿದ್ದರು. ‘ಮನೆಯಲ್ಲೇ ಕುಳಿತು ವಿಡಿಯೊ ನೋಡಿ ಹಣ ಗಳಿಸಿ’ ಎಂದು ಪ್ರಚಾರ ಮಾಡುತ್ತಿದ್ದರು. ಅದನ್ನು ನಂಬಿಯೇ ಜನ ಸದಸ್ಯರಾಗುತ್ತಿದ್ದರು’ ಎಂದು ಸಿಸಿಬಿ ಅಧಿಕಾರಿ ಹೇಳಿದರು.

‘ಚೈನ್ ಲಿಂಕ್‌ ಮೂಲಕವೂ ಆರೋಪಿ, ಜನರನ್ನು ಸೆಳೆಯುತ್ತಿದ್ದರು. 10ರಿಂದ 1 ಕೋಟಿ ಜನರನ್ನು ಸದಸ್ಯರನ್ನಾಗಿ ಮಾಡಿದರೆ ₹ 4,400ರಿಂದ ₹3.52 ಕೋಟಿ ಕಮಿಷನ್ ನೀಡುವುದಾಗಿಯೂ ಸದಸ್ಯರಿಗೆ ಆಮಿಷವೊಡ್ಡುತ್ತಿದ್ದ’ ಎಂದೂ ಅಧಿಕಾರಿ ತಿಳಿಸಿದರು.

‘ಮೊಬೈಲ್ ಆ್ಯಪ್‌ ಮೂಲಕ ಸಭೆ ನಡೆಸುತ್ತಿದ್ದ ಆರೋಪಿ, ಹೊರ ರಾಜ್ಯಗಳಲ್ಲೂ ಸದಸ್ಯತ್ವ ಮಾಡಿಸಿದ್ದರು. ಈತನ ವಿರುದ್ಧ ಮಾಗಡಿ ರಸ್ತೆ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.