ADVERTISEMENT

₹400 ಕೋಟಿ ಮೊತ್ತದ ಚೆಕ್‌ ಬೌನ್ಸ್‌: ಪ್ರಕರಣ ರದ್ದತಿಗೆ ಕೋರ್ಟ್ ನಕಾರ

₹400 ಕೋಟಿ ಮೊತ್ತದ ಚೆಕ್‌ ಬೌನ್ಸ್‌: ಎಂಬೆಸ್ಸಿ ಗ್ರೂಪ್‌ನ ವೀರ್ವಾನಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 20:12 IST
Last Updated 7 ಜುಲೈ 2022, 20:12 IST
 ಹೈಕೋರ್ಟ್
 ಹೈಕೋರ್ಟ್   

ಬೆಂಗಳೂರು: ‘ರಿಯಲ್‌ ಎಸ್ಟೇಟ್‌ ವ್ಯವಹಾರದ ಕೊಡು–ಕೊಳ್ಳುವಿಕೆಯಲ್ಲಿ ₹ 400 ಕೋಟಿ ಮೊತ್ತದ ಚೆಕ್‌ ಬೌನ್ಸ್‌ ಆಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ಎಂಬೆಸ್ಸಿ ಗ್ರೂಪ್‌ ಅಧ್ಯಕ್ಷ ಜಿತೇಂದ್ರ ವೀರ್ವಾನಿ ಹಾಗೂ ಇತರರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

‘ಮೆಸರ್ಸ್‌ ಒಎಂಆರ್‌ ಇನ್ವೆಸ್ಟ್‌ಮೆಂಟ್ಸ್‌ ಎಲ್ಎಲ್‌ಪಿ’ ಕಂಪನಿಯ ಅಧ್ಯಕ್ಷರು ಕೂಡಾ ಆಗಿರುವ ಜಿತೇಂದ್ರ ವೀರ್ವಾನಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ,‘ನಾವು ಈ ವ್ಯವಹಾರ
ದಲ್ಲಿ ಭಾಗಿಯಾಗಿಲ್ಲ ಎಂದು ಹೇಳುವ ಅರ್ಜಿದಾರರಿಗೆ ತಮ್ಮ ಮೇಲೆ ಅಷ್ಟೊಂದು ವಿಶ್ವಾಸವಿದ್ದರೆ, ವಿಚಾರಣೆ ಎದುರಿಸಿ ಶುದ್ಧವಾಗಿ ಹೊರಬರುವ ಅಗತ್ಯವಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಅರ್ಜಿದಾರರು ತಮ್ಮನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದರ ಹಿಂದೆ ವಿವಾದಾಸ್ಪದವಾದ ಅನೇಕ ಪ್ರಶ್ನೆಗಳಿವೆ. ಚೆಕ್‌ಗಳನ್ನು ಭದ್ರತೆಗಾಗಿ ಮಾತ್ರ ನೀಡಲಾಗಿದೆ ಎಂಬ ಅವರ ವಾದವನ್ನು ಈ ಹಂತದಲ್ಲಿ ಮಾನ್ಯ ಮಾಡಲು ಸಾಧ್ಯವಿಲ್ಲ. ಮೇಲಾಗಿ, ಕಂಪನಿಯ ಪದಾಧಿಕಾರಿಗಳ ಮೂಲಕ ಸಭೆ ನಡೆಸದೆ ಇಷ್ಟೊಂದು ಬೃಹತ್ ಮೊತ್ತದ ವಹಿವಾಟು ಕಾರ್ಯಗತಗೊಳ್ಳಲು ಹೇಗೆ ತಾನೇ ಸಾಧ್ಯ’ ಎಂದು ನ್ಯಾಯಪೀಠ ಅರ್ಜಿದಾರರನ್ನು ಪ್ರಶ್ನಿಸಿದೆ.

ADVERTISEMENT

‘ಆರೋಪಿಗಳು ಮತ್ತು ದೂರುದಾರರ ನಡುವಿನ ವ್ಯವಹಾರದ ಅಗಾಧತೆಯ ಬಗ್ಗೆ ನಮಗೆ ಗೊತ್ತಿಲ್ಲ ಎಂದುಕಂಪನಿಯ ನಿರ್ದೇಶಕರು ಅಥವಾ ಅಧ್ಯಕ್ಷರು ಹೇಳುವುದನ್ನು ಪುಷ್ಟೀಕರಿಸಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಆರೋಪಿಯಾಗಿರುವವರು ವ್ಯವಹಾರದಲ್ಲಿ ಯಾವ ರೀತಿ ಭಾಗಿಯಾಗಿದ್ದಾರೆ ಮತ್ತು ಆ ವ್ಯಕ್ತಿಗಳ ಪಾತ್ರವೇನು ಎಂಬುದನ್ನು ದೂರಿನಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಹಾಗಾಗಿ, ಇವರೆಲ್ಲಾ ವಿಚಾರಣೆಗೆ ಒಳಪಡಬೇಕು’ ಎಂದು ನ್ಯಾಯಪೀಠ ಹೇಳಿದೆ.

‘ಒಎಂಆರ್‌ಐ ಎಲ್‌ಎಲ್‌ಪಿ ಹೆಸರಿನಲ್ಲಿ ನೀಡಲಾಗಿದ್ದ ₹ 400 ಕೋಟಿ ಮೊತ್ತದ ಚೆಕ್‌ ಬೌನ್ಸ್ ಆಗಿದೆ’ ಎಂದು ಆರೋಪಿಸಿ ದುಬೈ
ನಿವಾಸಿ ಪರ್ಧನಾನಿ ಚತುರ್ಭುಜ ಬಸ್ಸಾರ್‌ಮಲ್‌ ಹೆಸರಿನ 80 ವರ್ಷದ ಹಿರಿಯ ನಾಗರಿಕರು ಸಲ್ಲಿಸಿರುವ ದೂರಿನ ಅನುಸಾರ ವೀರ್ವಾನಿ ಮತ್ತು ಇತರರ ವಿರುದ್ಧ ನಗರದ 21ನೇ ಎಸಿಎಂಎಂ ನ್ಯಾಯಾಲಯದಲ್ಲಿ, ನೆಗೊಷಿಯಬಲ್‌ ಇನ್‌ಸ್ಟ್ರುಮೆಂಟ್‌ ಕಾಯ್ದೆ–1881ರ ಕಲಂ 138ರ ಅನುಸಾರ ಪ್ರಕರಣ ದಾಖಲಿಸಲಾಗಿದೆ. ಒಎಂಆರ್‌ ಇನ್ವೆಸ್ಟ್‌ಮೆಂಟ್‌ ಕಂಪನಿಯು ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಮತ್ತು ವಸತಿಗೃಹ ನಿರ್ಮಾಣ ಕಂಪನಿಯೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.