ADVERTISEMENT

ಅಕ್ರಮ ವಲಸಿಗರನ್ನು ರಾಜ್ಯದಿಂದ ಹೊರಗೆ ಕಳುಹಿಸುವೆ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 20:13 IST
Last Updated 13 ಜೂನ್ 2021, 20:13 IST
ಬಿ.ಎಸ್.ಯಡಿಯೂರಪ್ಪ.
ಬಿ.ಎಸ್.ಯಡಿಯೂರಪ್ಪ.   

ಶಿಕಾರಿಪುರ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಬಾಂಗ್ಲಾದ‌‌‌ ಅಕ್ರಮ ವಲಸಿಗರು ನೆಲೆಸಿದ್ದು, ಇಂಥವರನ್ನು ರಾಜ್ಯದಿಂದ ಹೊರಕಳುಹಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

‘ರಾಜ್ಯದಲ್ಲಿ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. ಅಕ್ರಮವಾಗಿ ಬಂದಿರುವ ಅನೇಕ ವಿದೇಶಿಗರು ಇಲ್ಲಿಯೇ ನೆಲೆಸಿರುವುದು ನನ್ನ ಗಮನಕ್ಕೆ ಬಂದಿದೆ’ ಎಂದರು.

‘ಇನ್ನೂ ಅನೇಕರು ಬರುತ್ತಿದ್ದಾರೆ. ಅವರನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ’ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ರಾಜ್ಯದಲ್ಲಿ ನಿವೇಶನ ರಹಿತರಿಗೆ ಎರಡು ವರ್ಷದ ಅಧಿಕಾರವಧಿಯಲ್ಲಿ ನಿವೇಶನ ಹಂಚಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ರಾಜ್ಯದಲ್ಲಿ ಯಾರೊಬ್ಬರೂ ನಿವೇಶನ ರಹಿತವಾಗಿ ಇರಬಾರದು. ಇನ್ನೆರಡು ವರ್ಷದಲ್ಲಿ ಎಲ್ಲರಿಗೂ ನಿವೇಶನ ನೀಡಲು ಪ್ರಯತ್ನಿಸಲಾಗುತ್ತಿದೆ. ಪ್ರಸ್ತುತ ಲಾಕ್‌ಡೌನ್ ಮುಂದುವರಿಸಿರುವ ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಕಡಿಮೆಯಾದರೆ ಲಾಕ್‌ಡೌನ್ ತೆರವುಗೊಳಿಸುತ್ತೇವೆ’ ಎಂದರು.

‘ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿದೆ. ಜಲಾಶಯಗಳಲ್ಲಿ ಹೆಚ್ಚಿನ ನೀರು ಹರಿದು ಬರುತ್ತಿದೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಒಳ್ಳೆಯ ಬೆಳೆಯ ನಿರೀಕ್ಷೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.