ADVERTISEMENT

ಗೋಮಾಂಸ ತಿನ್ನುವುದೇ ಮೈಸೂರಿನ ಮುಖಂಡನ ಸಾಧನೆ: ಯಡಿಯೂರಪ್ಪ

ಪುಷ್ಪಾರ್ಚನೆ ಮೂಲಕ ಗ್ರಾ. ಪಂ ಸದಸ್ಯರಿಗೆ ಸಿ.ಎಂ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 9:22 IST
Last Updated 11 ಜನವರಿ 2021, 9:22 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ   

ಮೈಸೂರು: ‘ಕಾಂಗ್ರೆಸ್‌ ಪಕ್ಷ ಎಲ್ಲಿದೆ? ಯಾಕಾಗಿ ಅವರನ್ನು ನಾವು ಪದೇಪದೇ ನೆನಪು ಮಾಡಿಕೊಳ್ಳಬೇಕು? ರಾಜ್ಯ ಹಾಗೂ ಕೇಂದ್ರದಲ್ಲಿ ಎಲ್ಲಾದರೂ ಅವರ ನಾಯಕತ್ವ ಇದೆಯೇ? ಗೋಮಾಂಸ ತಿನ್ನುವುದೇ ಮೈಸೂರಿನ ಮುಖಂಡನ ದೊಡ್ಡ ಸಾಧನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ಬೆಂಬಲಿತ ಸದಸ್ಯರನ್ನು ಸನ್ಮಾನಿಸಲು ಬಿಜೆಪಿ ಆಯೋಜಿಸಿರುವ ‘ಜನ ಸೇವಕ್‌’ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

‘ಕಾಂಗ್ರೆಸ್‌ ಹಾಗೂ ಇಂಥ ನಾಯಕರ ಬಗ್ಗೆ ಮಾತನಾಡುವುದು ನಮಗೆ ಶೋಭೆ ತರುವಂಥದ್ದಲ್ಲ. ಅನೇಕ ರೀತಿಯಲ್ಲಿ ಟೀಕಿಸುತ್ತಿದ್ದಾರೆ, ಕೆಣಕುತ್ತಿದ್ದಾರೆ. ಮಾಧ್ಯಮಗಳಿಗೆ ನಾನು ಏನು ಪ್ರತಿಕ್ರಿಯೆ ಕೊಡಬಹುದು ಎಂಬುದಕ್ಕಾಗಿ ಕಾದಿರುತ್ತಾರೆ. ನಾನು ಪ್ರತಿಕ್ರಿಯೆ ಕೊಡುವುದನ್ನೇ ಕಡಿಮೆ ಮಾಡಿದ್ದೇನೆ’ ಎಂದರು.

ADVERTISEMENT

‘ನವದೆಹಲಿಗೆ ಭೇಟಿ ನೀಡಿದಾಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಸಾಧನೆ ವಿವರಿಸಿದೆ. ಉಳಿದ ರಾಜ್ಯಗಳಿಗೆ ಮಾರ್ಗದರ್ಶನ ನೀಡುವ ರೀತಿಯಲ್ಲಿ ಬೆಳೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 140ರಿಂದ 150 ಸ್ಥಾನ ಗೆಲ್ಲುವ ಭರವಸೆ ಕೊಟ್ಟು ಬಂದಿದ್ದೇನೆ’ ಎಂದು ಹೇಳಿದರು.

‘ನಾನು ಕೂಡ ಪುರಸಭೆ ಸದಸ್ಯನಾಗಿ ಶಿಕಾರಿಪುರದಲ್ಲಿ ರಾಜಕೀಯ ಜೀವನ ಆರಂಭಿಸಿದೆ. ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ ಎಂದು ಕನಸು ಕೂಡ ಕಂಡಿರಲಿಲ್ಲ. ಇಡೀ ರಾಜ್ಯದಲ್ಲಿ ಹುಚ್ಚನಂತೆ ಗ್ರಾಮ ಗ್ರಾಮಗಳಿಗೂ ಅಲೆದಿದ್ದೇನೆ, ಹಲವಾರು ಹೋರಾಟ ನಡೆಸಿದ್ದೇನೆ. ರೈತರ ಪಕ್ಷವನ್ನಾಗಿ ಮಾಡಲು ಹೋರಾಡಿದ್ದೇನೆ’ ಎಂದು ನುಡಿದರು.

ಸದಸ್ಯರ ಮೇಲೆ ಪುಷ್ಪಾರ್ಚನೆ ಮಾಡಿ ಅಭಿನಂದಿಸಿದರು. ಇದಕ್ಕೂ ಮುನ್ನ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ತಾಯಿ ಪೂಜೆ ಸಲ್ಲಿಸಿ 30 ಜಿಲ್ಲೆಗಳಲ್ಲಿ ಹಮ್ಮಿಕೊಂಡಿರುವ ಜನ ಸೇವಕ್‌ ಸಮಾವೇಶಕ್ಕೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.