ADVERTISEMENT

ವರ್ಷದಲ್ಲಿ ಚಿಕ್ಕಬಳ್ಳಾಪುರಕ್ಕೆ 13 ‘ಗೌಡಾ’

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 19:45 IST
Last Updated 4 ಆಗಸ್ಟ್ 2019, 19:45 IST

ಚಿಕ್ಕಬಳ್ಳಾಪುರ: ಒಂದು ವರ್ಷದಲ್ಲಿ ಜಿಲ್ಲೆಯ ಸುಮಾರು 13 ಜನ ವಿವಿಧ ರಾಜ್ಯ ಮತ್ತು ವಿದೇಶಗಳ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‌ ಪಡೆದಿದ್ದಾರೆ.

ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ ತಾಲ್ಲೂಕುಗಳಲ್ಲಿ ತಲಾ 3, ಗೌರಿಬಿದನೂರಿನಲ್ಲಿ 2, ಗುಡಿಬಂಡೆ, ಬಾಗೇಪಲ್ಲಿ ತಾಲ್ಲೂಕಿನಲ್ಲಿ ತಲಾ ಒಬ್ಬರು ಗೌಡಾ ಪಡೆದುಕೊಂಡಿದ್ದಾರೆ.

ಚಿಂತಾಮಣಿಯಲ್ಲಿ ಡೋಲು ವಾದಕ, ಪ್ರೌಢಶಾಲೆ ಶಿಕ್ಷಕ, ಫೈನಾನ್ಸಿಯರ್‌, ಶಿಡ್ಲಘಟ್ಟ ತಾಲ್ಲೂಕಿನ ರೇಷ್ಮೆ ಬೆಳೆಗಾರ, ವೀರಗಾಸೆ ಕಲಾವಿದ, ಸಮಾಜ ಸೇವಕನೆಂದು ಕರೆದುಕೊಳ್ಳುವ ಯುವಕನೊಬ್ಬನಿಗೂ ಗೌಡಾ ಸಂದಾಯವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಒಬ್ಬ ಪತ್ರಕರ್ತ, ಸಮಾಜ ಸೇವಕರು ಎಂದು ಕರೆದುಕೊಳ್ಳುವ ಇಬ್ಬರು ರಾಜಕಾರಣಿಗಳ ಹಿಂಬಾಲಕರು ಸದ್ಯ ತಮ್ಮ ಹೆಸರಿನೊಂದಿಗೆ ‘ಡಾ.’ ಬರೆದುಕೊಂಡು ಬೀಗುತ್ತಿದ್ದಾರೆ.

ADVERTISEMENT

ಬಾಗೇಪಲ್ಲಿಯಲ್ಲಿ ಪುರಸಭೆ ಸದಸ್ಯೆಯೊಬ್ಬರು, ಗೌರಿಬಿದನೂರು ತಾಲ್ಲೂಕಿನಲ್ಲಿ ಸಂಘಟನೆಯೊಂದರ ಮುಖಂಡ, ಲೇಖಕಿಯೊಬ್ಬರು ಗೌಡಾ ಪಡೆದು ಹಲವು ಸಂಘ ಸಂಸ್ಥೆಗಳ ಅಭಿನಂದನೆಗೆ ಪಾತ್ರರಾಗಿದ್ದಾರೆ. ಗೌಡಾ ಪಡೆದ
ಬಹುಪಾಲು ಜನರಿಗೆ ‘ಡಾ.’ ಬಗ್ಗೆ ಇನ್ನಿಲ್ಲದ ವ್ಯಾಮೋಹ ಎನ್ನುವುದು ಬಲ್ಲವರ ಅಭಿಪ್ರಾಯ.

‘ವೃತ್ತಿಯಿಂದ ಪ್ರೌಢಶಾಲೆ ಶಿಕ್ಷಕರಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರು, ಈ ಹಿಂದೆ ಗೌರವ ಡಾಕ್ಟರೇಟ್‌ ಪಡೆದುಕೊಳ್ಳುತ್ತಿದ್ದಂತೆ ಅದಕ್ಕಾಗಿ ಎಲ್ಲ ತಾಲ್ಲೂಕು ಘಟಕಗಳ ಅಧ್ಯಕ್ಷರಿಗೆ ತಮಗೆ ಸನ್ಮಾನ ಏರ್ಪಡಿಸಬೇಕೆಂದು ದುಂಬಾಲು ಬಿದ್ದಿದ್ದರು. ಒಪ್ಪದವರ ವಿರುದ್ಧ ಸಲ್ಲದ ಆರೋಪ ಮಾಡಿ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿದರು’ ಎನ್ನುತ್ತಾರೆ ಕಸಾಪದ ಪದಾಧಿಕಾರಿಯೊಬ್ಬರು.

‘ಕಸಾಪದ ಯಾವುದೇ ಕಾರ್ಯಕ್ರಮವಿರಲಿ ಅದರ ಫ್ಲೇಕ್ಸ್‌ನಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರ ಹೆಸರಿನ ಮುಂದೆ ಕಡ್ಡಾಯವಾಗಿ ‘ಡಾ.’ ಎಂದು ಬರೆಯಲೇಬೇಕು ಎನ್ನುವುದು ಅವರ ಅಘೋಷಿತ ಷರತ್ತು. ಅದನ್ನು ಪಾಲಿಸದವರಿಗೆ ಸರಿಯಾಗಿ ಅನುದಾನದ ಹಣ ನೀಡದೆ ಗೋಳಾಡಿಸುತ್ತಾರೆ’ ಎನ್ನುವುದು ನೊಂದವರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.