ADVERTISEMENT

ಯೋಧನೊಂದಿಗೆ ಪತ್ನಿಯರ ಸತಿಸಹಗಮನದ ಮಾಸ್ತಿಕಲ್ಲು

16ನೇ ಶತಮಾನದ ವೀರಗಲ್ಲು, ಮಾಸ್ತಿಕಲ್ಲು ಕೆತ್ತನೆ

ಸತೀಶ್‌ ಜೈನ್‌
Published 10 ಫೆಬ್ರುವರಿ 2019, 5:00 IST
Last Updated 10 ಫೆಬ್ರುವರಿ 2019, 5:00 IST
ವೀರಗಲ್ಲು(ಬಾಳೆಹೊನ್ನೂರು ಚಿತ್ರ)
ವೀರಗಲ್ಲು(ಬಾಳೆಹೊನ್ನೂರು ಚಿತ್ರ)   

ತುಳುವಿನಕೊಪ್ಪ (ಬಾಳೆಹೊನ್ನೂರು): ಹದಿನಾರನೇ ಶತಮಾನದ ಕೆಳದಿ ಅರಸರ ಕಾಲದ ವೀರಗಲ್ಲು ಶಾಸನ ತುಳುವಿನಕೊಪ್ಪ ಗ್ರಾಮ ಹೊಸಗದ್ದೆ ಬಯಲು ಎಂಬಲ್ಲಿ ಪತ್ತೆಯಾಗಿದೆ ಎಂದು ಹವ್ಯಾಸಿ ಇತಿಹಾಸ ಸಂಶೋಧಕ ನ.ಸುರೇಶ ಕಲ್ಕೆರೆ ತಿಳಿಸಿದ್ದಾರೆ.

ಪ್ರಾರಂಭದಲ್ಲಿ ಹುಂಚದಲ್ಲಿ ಆಳಿದ ಸಾಂತರರು ನಂತರ ಕಳಸ ಕಾರ್ಕಳವನ್ನು ಕೇಂದ್ರವಾಗಿಟ್ಟು ರಾಜ್ಯ ನಡೆಸಿದರು. ಆಗಾಗ ಕೆಳದಿ ಅರಸರಿಗೂ ಕಳಸದ ಭೈರವರಸರಿಗೂ ಆಗಾಗ ಕಾಳಗಗಳು ನಡೆಯುತ್ತಲೇ ಇದ್ದವು.

ಕೊಪ್ಪ ತಾಲ್ಲೂಕಿನ ಸೀತಾನದಿ ಇವರಿಬ್ಬರ ಗಡಿ ಪ್ರದೇಶವಾಗಿದ್ದು, ಸೀತಾನದಿಯ ಆಚೆ ಬಗ್ಗುಂಜಿ ಬೈರವರಸರಿಗೆ ಸೇರಿದ್ದಾಗಿದ್ದು ಸೀತಾನದಿಯ ಈಚೆ ದಡ ಕೆಳದಿ ಅರಸರಿಗೆ ಸೇರಿದ್ದೆಂದು ಹೇಳಲಾಗುತ್ತಿದೆ. 1662 ರಿಂದ 1672ರವರೆಗೆ ಆಳಿದ ಕೆಳದಿಯ ಸೋಮಸೇಖರ ನಾಯಕ ಕಾರ್ಕಳ ಕಳಸ ಆಡಳಿತಕ್ಕೆ ಸೇರಿದ್ದ ಕಾಳಲದೇವಿ ರಾಣಿಯ ರಾಜಧಾನಿ ಬಗ್ಗುಂಜಿಯ ಮೇಲೆ ಯುದ್ಧ ಮಾಡಿ ಈ ಪ್ರದೇಶವನ್ನು ಗೆದ್ದುಕೊಂಡನೆಂಬುದಾಗಿ ಇತಿಹಾಸದಲ್ಲಿದ ದಾಖಲಾಗಿದೆ.

ADVERTISEMENT

ಆ ಸಮಯದಲ್ಲಿ ನಡೆದ ಯುದ್ಧದಲ್ಲಿ ಕೆಳದಿಯ ದಂಡನಾಯಕನೊಬ್ಬ ಈ ಹೊಸಗದ್ದೆ ಬಯಲಿನಲ್ಲಿ ವೀರಮರಣವನ್ನಪ್ಪುತ್ತಾನೆ. ಆತನ ನೆನಪಿಗಾಗಿ ನೆಟ್ಟ ಈ ವೀರಗಲ್ಲು 70ಸೆ.ಮೀ ಎತ್ತರ 45ಸೆಂ.ಮೀ ಅಗಲವಾಗಿದ್ದು ಮೂರು ಪಟ್ಟಿಕೆಗಳನ್ನು ಹೊಂದಿದೆ. ಮೇಲ್ಬಾಗದ ಪಟ್ಟಿಕೆಯಲ್ಲಿ ಮಧ್ಯೆ ಶಿವಲಿಂಗವಿದ್ದು ಒಂದು ಪಕ್ಕದಲ್ಲಿ ಯೋಧಕುಳಿತಿದ್ದರೆ, ಇನ್ನೊಂದು ಪಕ್ಕ ನಂದಿಯ ಉಬ್ಬು ಶಿಲ್ಪ ಅದರ ಮೇಲ್ಬಾಗ ಸೂರ್ಯ ಚಂದ್ರರ ಚಿತ್ರವಿದೆ.

ಮಧ್ಯದ ಪಟ್ಟಿಕೆಯಲ್ಲಿ ಸ್ತ್ರೀಯರ ಮಧ್ಯೆ ನಿಂತ ಯೋಧನ ಚಿತ್ರವಿದ್ದರೆ, ಕೆಳಭಾಗದ ಪಟ್ಟಿಕೆಯಲ್ಲಿ ಯುದ್ಧ ಮಾಡುವ ಚಿತ್ರ ಕೆತ್ತಲಾಗಿದ್ದು, ಸೈನಿಕರ ಕೈಯಲ್ಲಿ ಬಿಲ್ಲುಬಾಣ, ಕತ್ತಿಹಿಡಿದಿರುವ ಉಬ್ಬು ಚಿತ್ರವಿದೆ. ವಿಶೇಷವೆಂದರೆ ಮಹಿಳೆಯರೂ ಯುದ್ಧ ಮಾಡುತ್ತಿರುವ ಚಿತ್ರವಿದೆ. ಈ ವೀರಗಲ್ಲಿನ ಪಕ್ಕ ಮತ್ತು ಮುಂದುಗಡೆ ನಾಲ್ಕು ಮಾಸ್ತಿಕಲ್ಲುಗಳನ್ನು ನೆಡಲಾಗಿದೆ.

ಯೋಧನ ನಾಲ್ವರು ಪತ್ನಿಯರೂ ಒಟ್ಟಿಗೆ ಯೋಧನ ದೇಹದೊಂದಿಗೆ ಸತಿಹೋಗಿದ್ದು ಅವರ ನೆನಪಿಗೂ ಮಾಸ್ತಿಕಲ್ಲುಗಳನ್ನು ನೆಟ್ಟಿದ್ದಾರೆ. ಈ ಎಲ್ಲಾ ಮಾಸ್ತಿ ಮತ್ತು ವೀರಗಲ್ಲಿಗೂ ಸೇರಿಸಿ 120ಸೆ.ಮೀ ಸುತ್ತಳತೆ ಕಲ್ಲಿನ ಕಟ್ಟೆ ಕಟ್ಟಲಾಗಿದೆ. ಜನ ಇದನ್ನು ರಥದ ಕೊಟ್ಟಿಗೆ ಎಂದು ಕರೆಯುತ್ತಿದ್ದು 1960-70ರ ದಶಕದವರೆಗೂ ರಥ ಬಂದು ನಿಲ್ಲುವ ಜಾಗವೆಂದು ಪೂಜಿಸುತ್ತಿದ್ದರು ಎಂದು ಸುರೇಶ್‍ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.