ADVERTISEMENT

5 ವರ್ಷದಲ್ಲಿ 57 ಸಾವಿರ ಶಿಶುಗಳ ಸಾವು: ಇದು ಕರ್ನಾಟಕ ಕತೆ

ಆತಂಕ ಸೃಷ್ಟಿಸಿದ 5 ವರ್ಷದ ಸುದ್ದಿ: ಅರಳುವ ಮುನ್ನವೇ ಬಾಡುತ್ತಿವೆ ಕರುಳಬಳ್ಳಿ

ವರುಣ ಹೆಗಡೆ
Published 9 ಜನವರಿ 2020, 1:41 IST
Last Updated 9 ಜನವರಿ 2020, 1:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು : ಹಿಂದುಳಿದ ರಾಜ್ಯಗಳಲ್ಲಿ ಮಾತ್ರ ಆತಂಕಕಾರಿ ಸದ್ದು ಮಾಡುತ್ತಿದ್ದ ನವಜಾತ ಶಿಶುಗಳ ಮರಣ ಪ್ರಮಾಣ ಅಭಿವೃದ್ಧಿ ಶೀಲ ರಾಜ್ಯವೆಂದು ಹೆಸರಾದ ಕರ್ನಾಟಕದಲ್ಲೂ ಹೆಚ್ಚುತ್ತಿರುವ ಆಘಾತಕಾರಿ ಸಂಗತಿ ಹೊರಬಿದ್ದಿದ್ದು, ಐದು ವರ್ಷಗಳಲ್ಲಿ57,655 ಕಂದಮ್ಮಗಳು ಅರಳುವ ಮುನ್ನವೇ ಕಣ್ಣು ಮುಚ್ಚಿವೆ.

ನವಜಾತ ಶಿಶುಗಳ ಮರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮತ್ತು ರಾಜಸ್ಥಾನ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಅಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಪ್ರತಿ ವರ್ಷ ಜನಿಸಿದ ಸಾವಿರ ಶಿಶುಗಳಲ್ಲಿ ಸರಾಸರಿ 35 ಕೂಸುಗಳು ತಮ್ಮ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮುನ್ನವೇಗುಜರಾತ್‌ನಲ್ಲಿ ಅಸುನೀಗುತ್ತಿವೆ. ನಮ್ಮ ರಾಜ್ಯದಲ್ಲಿ ಸರಾಸರಿ 25 ಕಂದಮ್ಮಗಳು ಅಪೌಷ್ಟಿಕತೆ ಸೇರಿದಂತೆ ವಿವಿಧ ಕಾರಣಗಳಿಂದ ಜೀವ ಕಳೆದುಕೊಳ್ಳುತ್ತಿವೆ. ನವಜಾತ ಶಿಶುಗಳ ರಕ್ಷಣೆಗೋಸ್ಕರ ಆರೋಗ್ಯ ಇಲಾಖೆಯು ಕಾಂಗರೂ ಮದರ್‌ಕೇರ್‌, ನವಜಾತ ಶಿಶು ಸ್ಥಿರೀಕರಣ ಘಟಕ ಸೇರಿದಂತೆ ವಿವಿಧ ಮಕ್ಕಳ ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ಬಾರದಿರುವುದು ಅಧಿಕಾರಿಗಳಿಗೂ ತಲೆನೋವಾಗಿದೆ.

ಪ್ರತಿ ವರ್ಷ ₹12 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಮಕ್ಕಳ ಆರೋಗ್ಯ ರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೆಚ್ಚ ಮಾಡುತ್ತಿವೆ.ಆದರೂ ಸರಾಸರಿ 10 ಸಾವಿರ ಶಿಶುಗಳು ಸಾವಿಗೀಡಾಗುತ್ತಿವೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ 3,208 ಕಂದಮ್ಮಗಳು ಕೊನೆಯುಸಿರೆಳೆದಿವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಶಿಶುಗಳು ಅಸುನೀಗಿದ ಪ್ರಕರಣಗಳು ವರದಿಯಾಗಿವೆ. ಈ ಕಳಂಕಕ್ಕೆ ತುತ್ತಾಗಿರುವುದು ಬಡ ಮತ್ತು ಮಧ್ಯಮ ವರ್ಗದ ಕುಟುಂಬದವರು ಚಿಕಿತ್ಸೆಗೆ ನೆಚ್ಚಿಕೊಂಡ ಸರ್ಕಾರಿ ಆಸ್ಪತ್ರೆಗಳೇ ಎಂಬುದು ಗಮನಾರ್ಹ.

ADVERTISEMENT

ನಿತ್ಯ 32 ಶಿಶುಗಳ ಸಾವು:ರಾಜ್ಯದಲ್ಲಿ ಪ್ರತಿನಿತ್ಯ ಸರಾಸರಿ 32 ಶಿಶುಗಳು ಸಾಯುತ್ತಿವೆ. ಬೆಂಗಳೂರು ನಗರ, ಕಲಬುರ್ಗಿ, ರಾಯಚೂರು, ಮೈಸೂರು, ಧಾರವಾಡ,ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ವರ್ಷ ತಲಾ 500ಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಚಿಕ್ಕಮಗಳೂರು, ಕೊಡಗು, ಚಾಮರಾಜನಗರ ಹಾಗೂ ರಾಮನಗರ ಜಿಲ್ಲೆಯಲ್ಲಿ ಕಡಿಮೆ ಪ್ರಕರಣಗಳು ಬೆಳಕಿಗೆ ಬಂದಿವೆ.

‘ಉತ್ತರ ಭಾರತದ ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ ನಮ್ಮಲ್ಲಿ ಶಿಶುಗಳ ಮರಣ ಪ್ರಮಾಣ ಕಡಿಮೆಯಿದೆ. ಗೃಹ ಆಧಾರಿತ ಶಿಶು ಆರೈಕೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮರಣ ಪ್ರಮಾಣ ಇಳಿಕೆಗೆ ಕ್ರಮಕೈಗೊಳ್ಳಲಾಗಿದೆ’ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಪ್ರತಿಪಾದಿಸಿದರು.

‘5 ವರ್ಷದೊಳಗಿನ ಸಾವಿರ ಮಕ್ಕಳಲ್ಲಿ 29 ಮಕ್ಕಳು ಅತಿಸಾರ ಭೇದಿಯಿಂದ ಸಾಯುತ್ತಿದ್ದಾರೆ. ಇದನ್ನು ತಡೆಗಟ್ಟಿದಲ್ಲಿ ಮರಣವನ್ನು ಶಿಶುಗಳ ಮರಣವನ್ನು ನಿಯಂತ್ರಣಕ್ಕೆ ತರಬಹುದು. ಗೃಹ ಆಧಾರಿತ ನವಜಾತ ಶಿಶು ಆರೈಕೆಯಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ಬಲಪಡಿಸಬೇಕಾಗಿದೆ’ ಎಂದು ಅವರು ಹೇಳಿದರು.

ನವಜಾತ ಶಿಶುಗಳ ಮರಣಕ್ಕೆ ಕಾರಣಗಳು

* ಆರೋಗ್ಯ ಕೇಂದ್ರಗಳಲ್ಲಿ ಮೂಲಸೌಕರ್ಯ ಕೊರತೆ

* ಪೌಷ್ಟಿಕಾಂಶದ ಕೊರತೆ

* ಕಡಿಮೆ ತೂಕ

* ಅವಧಿ ಪೂರ್ವ ಜನನ

* ಆರೈಕೆ ಕೊರತೆ

* ಉಸಿರಾಟದ ಸಮಸ್ಯೆ

* ಅಂಗವಿಕಲತೆ

***

ದೇಹದಲ್ಲಿನ ಉಷ್ಣಾಂಶ ಕಡಿಮೆ ಸೇರಿದಂತೆ ವಿವಿಧ ಕಾರಣಗಳಿಂದ ಶಿಶುಗಳು ಕೊನೆಯುಸಿರೆಳೆಯುತ್ತಿವೆ. ನವಜಾತ ಶಿಶುಗಳ ಆರೈಕೆ ಕೇಂದ್ರಗಳನ್ನು ವಿಸ್ತರಿಸಿ, ಮೂಲಸೌಕರ್ಯ ಒದಗಿಸಬೇಕು
–ಡಾ. ಗೀತಾ ಶಿವಮೂರ್ತಿ, ವಾಣಿ ವಿಲಾಸ ಆಸ್ಪತ್ರೆಯ ವೈದ್ಯ ಅಧೀಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.