ಅತ್ಯಾಚಾರ
ರಾಮನಗರ: ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆಯಲ್ಲಿ ಬುಧವಾರ ನಡೆದಿದ್ದ 13 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಠಾಣೆ ಪೊಲೀಸರು, ಘಟನೆ ನಡೆದ ಕೆಲವೇ ತಾಸುಗಳಲ್ಲಿ ಆರೋಪಿ ಯಲ್ಲಪ್ಪ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ರಾಯಚೂರು ಜಿಲ್ಲೆಯ 25 ವರ್ಷದ ಯಲ್ಲಪ್ಪ ಕಟ್ಟಡ ಕಾರ್ಮಿಕನಾಗಿದ್ದಾನೆ. ಕೊಪ್ಪಳ ಜಿಲ್ಲೆಯ ಬಾಲಕಿ ತಂದೆ–ತಾಯಿ ಸಹ ಕಟ್ಟಡ ಕಾರ್ಮಿಕರಾಗಿದ್ದಾರೆ. ತಾವರೆಕೆರೆಯಲ್ಲಿ ಒಬ್ಬನೇ ನೆಲೆಸಿದ್ದ ಆರೋಪಿ, ಬಾಲಕಿ ಮನೆ ಬಳಿ ಆಗಾಗ ಬಂದು ಹೋಗುತ್ತಿದ್ದ. ದಂಪತಿ ಕೆಲಸಕ್ಕೆ ಮತ್ತು ಅವರ ಮಕ್ಕಳು ಶಾಲೆಗೆ ಹೋದ ನಂತರ, ಬಾಲಕಿ ಒಬ್ಬಳೇ ಮನೆಯಲ್ಲಿರುವುದನ್ನು ಅರಿತಿದ್ದ ಎಂದು ಮೂಲಗಳು ತಿಳಿಸಿವೆ.
ಕೂಗಲೆತ್ನಿಸಿದಾಗ ಕೊಲೆ: ಮಧ್ಯಾಹ್ನ 1.30ರ ಸುಮಾರಿಗೆ ಬೈಕ್‌ನಲ್ಲಿ ಬಾಲಕಿ ಮನೆಗೆ ಬಂದಿದ್ದ ಆರೋಪಿ, ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಬಲವಾದ ಪ್ರತಿರೋಧ ತೋರಿ ಕೂಗಿಕೊಳ್ಳಲು ಯತ್ನಿಸಿದ್ದಾಳೆ. ಆಗ ಆರೋಪಿ, ಎಲ್ಲಿ ತಾನು ಸಿಕ್ಕಿ ಬೀಳುತ್ತೆನೊ ಎಂಬ ಭಯದಿಂದ ಮನೆಯೊಳಗೆ ಇದ್ದ ದೊಣ್ಣೆಯಿಂದ ತಲೆ ಮತ್ತು ಮುಖಕ್ಕೆ ಹೊಡೆದು ಕೊಲೆ ಮಾಡಿದ್ದಾನೆ.
ಕೃತ್ಯದ ಬಳಿಕ ಮನೆಯಿಂದ ಹಾಗೆಯೇ ಹೋದರೆ ಯಾರಿಗಾದರೂ ಅನುಮಾನ ಬರಲಿದೆ ಅಂದುಕೊಂಡು, ಒಳಗಿದ್ದ ಸಿಲಿಂಡರ್ ತೆಗೆದುಕೊಂಡು ಹೋಗಿದ್ದಾನೆ. ಮಧ್ಯಾಹ್ನ 2ರ ಸುಮಾರಿಗೆ ಬಾಲಕಿ ಸಹೋದರ ಮನೆಗೆ ಬಂದಾಗ ತನ್ನ ಅಕ್ಕ ಅರೆ ನಗ್ನಾವಸ್ಥೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದ. ಸ್ಥಳೀಯರು ಠಾಣೆಗೆ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಸುಳಿವು ಕೊಟ್ಟ ಕ್ಯಾಮೆರಾ: ರಕ್ತದ ಮಡುವಿನಲ್ಲಿದ್ದ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಾಗ, ಅಷ್ಟೊತ್ತಿಗಾಗಲೇ ಆಕೆ ಕೊನೆಯುಸಿರೆಳೆದಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದರು. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಿ, ಆರೋಪಿ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಆಗ ಆರೋಪಿ ಯಲ್ಲಪ್ಪ ಬೈಕ್‌ನಲ್ಲಿ ಮನೆ ಬಳಿ ಬಂದು, ಕೆಲ ನಿಮಿಷದ ಬಳಿಕ ಅನುಮಾನಾಸ್ಪದವಾಗಿ ಸಿಲಿಂಡರ್‌ನೊಂದಿಗೆ ಹೋಗುವುದು ಗೊತ್ತಾಯಿತು. ಆತನ ಮಾಹಿತಿ ವಿವರ ಕಲೆಹಾಕಿ ರಾತ್ರಿಯೇ ಆತನನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.