ADVERTISEMENT

ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಕ್ಲಬ್‌ ಕಡ್ಡಾಯ

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಅಂತೋನಿ ಸೆಬಾಸ್ಟಿಯನ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 13:47 IST
Last Updated 4 ಜುಲೈ 2019, 13:47 IST

ಕಲಬುರ್ಗಿ: ‘ಹೈದರಾಬಾದ್‌ ಕರ್ನಾಟಕ ವ್ಯಾಪ್ತಿಯ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ‘ಮಕ್ಕಳ ಹಕ್ಕುಗಳ ಕ್ಲಬ್‌’ಗಳನ್ನು ಕಡ್ಡಾಯವಾಗಿ ಆರಂಭಿಸಬೇಕು. ಇನ್ನೆರಡೇ ದಿನದಲ್ಲಿ ಇದಕ್ಕೆ ಆದೇಶ ಹೊರಡಿಸಬೇಕು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಅಂತೋನಿ ಸೆಬಾಸ್ಟಿಯನ್‌ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದಲ್ಲಿ ಗುರುವಾರ ಈ ಭಾಗದ ಆರೂ ಜಿಲ್ಲೆಗಳ ಮಕ್ಕಳ ಪ್ರತಿನಿಧಿಗಳು, ಮಕ್ಕಳ ಹಕ್ಕುಗಳ ಕ್ಲಬ್, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಜತೆ ಸಂವಾದ ನಡೆಸಿ, ಅಹವಾಲುಗಳನ್ನು ಆಲಿಸಿ ಅವರು ಮಾತನಾಡಿದರು.

‘ಸರ್ಕಾರದ ಸುತ್ತೋಲೆ ಅನ್ವಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಕ್ಲಬ್‌ ಇರಲೇಬೇಕು. ಆದರೆ, ಬಹುಪಾಲು ಶಾಲೆಗಳಲ್ಲಿ ಇದೂವರೆಗೆ ಕ್ಲಬ್‌ ಹೆಸರನ್ನೇ ಕೇಳಿಲ್ಲ ಎಂದು ಮಕ್ಕಳು ದೂರುತ್ತಿದ್ದಾರೆ. 2006ರಲ್ಲಿ ಆರಂಭವಾದ ಈ ಪ್ರಕ್ರಿಯೆ ಇದೂವರೆಗೂ ಹಳ್ಳಿಗಳನ್ನು ಮುಟ್ಟಿಲ್ಲ ಎಂಬುದು ಬೇಸರದ ಸಂಗತಿ. ಇನ್ನು ಮುಂದೆ ವಿಳಂಬ ಮಾಡುವಂತಿಲ್ಲ’ ಎಂದು ಅವರು ಆಯಾ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣಾಧಿಕಾರಿಗಳಿಗೆ ತಾಕೀತು ಮಾಡಿದರು.

ADVERTISEMENT

‘ಮಕ್ಕಳ ಹಕ್ಕುಗಳ ಕ್ಲಬ್‌ ಹಾಗೂ ಎಸ್‌ಡಿಎಂಸಿ ಜಂಟಿಯಾಗಿ ಕೆಲಸ ಮಾಡಬೇಕು. ಶಾಲೆಯ ಬೇಡಿಕೆಗಳು ಅಥವಾ ಮಂಜೂರಾಗುವ ಯಾವುದೇ ಯೋಜನೆಗಳ ಬಗ್ಗೆ ಈ ಎರಡೂ ತಂಡಗಳ ಸದಸ್ಯರ ಜತೆಗೆ ಚರ್ಚಿಸಬೇಕು’ ಎಂದೂ ಅವರು ನಿರ್ದೇಶನ ನೀಡಿದರು.

ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಭಟ್‌ ಮಾತನಾಡಿ, ‘ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದಷ್ಟೇ ನಮ್ಮ ಕೆಲಸವಲ್ಲ. ಅವುಗಳನ್ನು ತಿಳಿದುಕೊಳ್ಳುವ ಜತೆಗೆ, ಅನುಭವಿಸುವುದೂ ಮುಖ್ಯ. ಆಗ ಮಾತ್ರ ವಿ.ಪಿ. ಬಳಿಗಾರ ಅವರ ಈ ಕನಸು ನನಸಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣಾಧಿಕಾರಿಗಳು, ಎಸ್‌ಡಿಎಂಸಿ ಸದಸ್ಯರು, ಪಾಲಕರು ಸಮ್ಮಿಳಿತವಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ದ್ವಿಸದಸ್ಯ ಪೀಠವು ಜುಲೈ 5ರಂದು ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ವಿಚಾರಣೆ ನಡೆಸಲಿದೆ. ಈ ಭಾಗದ ಜ್ವಲಂತ ಸಮಸ್ಯೆಗಳನ್ನು ಆಯೋಗದ ಮುಂದೆ ಎಳೆಎಳೆಯಾಗಿ ಬಿಚ್ಚಿಡಬೇಕು’ ಎಂದೂ ಅವರು ಅಧಿಕಾರಿಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.