ಬೆಂಗಳೂರು: ಶಾಲೆಗಳಲ್ಲಿ ಆನ್‌ಲೈನ್ ಸುರಕ್ಷತೆಯ ಮಾಹಿತಿ ಒಳಗೊಂಡ ಪಾಠಗಳನ್ನು ಅಳವಡಿಸಿ, ಡಿಜಿಟಲ್ ಸುರಕ್ಷತಾ ಶಿಕ್ಷಣ ಕಡ್ಡಾಯಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಚೈಲ್ಡ್ ಫಂಡ್ ಇಂಡಿಯಾ ನಡೆಸಿದ ಅಧ್ಯಯನ ವರದಿ ಶಿಫಾರಸು ಮಾಡಿದೆ.
ಕರ್ನಾಟಕದಲ್ಲಿ ಆನ್‌ಲೈನ್ ಲೈಂಗಿಕ ಶೋಷಣೆ, ನಿಂದನೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿವೆ. ಇಂತಹ ಬೆದರಿಕೆಗಳನ್ನು ಪರಿಹರಿಸುವ ತುರ್ತು ಅಗತ್ಯವಿದೆ. ಮಕ್ಕಳ ಇಂಟರ್‌ನೆಟ್ ಬಳಕೆಯ ಮೇಲೆ ಪೋಷಕರು ನಿಗಾವಹಿಸಬೇಕು ಎಂದು ಹೇಳಿದೆ.
ಚಾಮರಾಜನಗರ, ರಾಯಚೂರು, ಚಿಕ್ಕಮಗಳೂರು, ಬೆಳಗಾವಿ ಮತ್ತು ಬೆಂಗಳೂರು ನಗರಗಳ ಶಾಲೆಗಳಲ್ಲಿನ 8-11, 12-14 ಮತ್ತು 15-18 ವರ್ಷದೊಳಗಿನ 903ಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.
ವರದಿಯ ಪ್ರಕಾರ 15–18 ವರ್ಷ ವಯಸ್ಸಿನ ಶೇ 5ರಷ್ಟು ಮಕ್ಕಳು ಆನ್‌ಲೈನ್‌ನಲ್ಲಿ ಅಸುರಕ್ಷಿತ ಅಥವಾ ಮುಜುಗರಕ್ಕೊಳಗಾಗಿದ್ದಾರೆ. ಈ ಪ್ರಕರಣಗಳಲ್ಲಿ ಇನ್‌ಸ್ಟ್ರಾಗ್ರಾಂ, ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಪಾಲು ಶೇ 77ರಷ್ಟು ಇದೆ. ಇಂತಹ ಅಪರಾಧ ಎಸಗುವವರು ಅಪರಿಚಿತರು ಎಂದು ಶೇ 53ರಷ್ಟು ಮಕ್ಕಳು, ಪರಿಚಿತರೇ ಅಪರಾಧ ಎಸಗುತ್ತಿದ್ದಾರೆ ಎಂದು ಶೇ 35ರಷ್ಟು ಮಕ್ಕಳು ಅಭಿಪ್ರಾಯ ನೀಡಿದ್ದಾರೆ. ಶೇ 12ರಷ್ಟು ಮಕ್ಕಳು ಎರಡೂ ಪ್ರಕಾರದ ವ್ಯಕ್ತಿಗಳಿಂದ ಕಹಿ ಅನುಭವ, ಶೇ 15ರಷ್ಟು ಮಕ್ಕಳು ಹಾನಿಯನ್ನು ಅನುಭವಿಸಿದ್ದಾರೆ. ಶೇ 34ರಷ್ಟು ಮಕ್ಕಳು ಈ ಕುರಿತು ಪೋಷಕರಿಗೆ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶೇ 50ರಷ್ಟು ಮಕ್ಕಳು ತಮ್ಮ ಚಾಟ್‌ಗಳನ್ನು ಅಳಿಸಿಹಾಕಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
15 ವರ್ಷಕ್ಕಿಂತ ಕಡಿಮೆ ಇರುವ ಶೇ 90ರಷ್ಟು ಮಕ್ಕಳು, 15-18 ವರ್ಷದ ಒಳಗಿನ ಶೇ 99ರಷ್ಟು ಮಕ್ಕಳು ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್ ಬಳಸುತ್ತಿದ್ದಾರೆ. ಕೋವಿಡ್ ನಂತರ ಶೇ 72ರಷ್ಟು ಮಕ್ಕಳು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ ಎನ್ನುವ ಅಂಶಗಳನ್ನು ಅಧ್ಯಯನದ ವೇಳೆ ಪತ್ತೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.