ADVERTISEMENT

ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ: ಕಟ್ಟುನಿಟ್ಟಿನ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 19:54 IST
Last Updated 10 ನವೆಂಬರ್ 2019, 19:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಶಾಲೆಗಳಲ್ಲಿ ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ಸಲುವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಕೆಲವು ‘ಸುರಕ್ಷತಾ ಮಾರ್ಗದರ್ಶಿ’ಗಳನ್ನು ಹೊರಡಿಸಿದ್ದು, ಶಾಲೆಗಳು ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಸೂಚಿಸಿದೆ.

ಶಾಲೆಗಳಲ್ಲಿ ಮಕ್ಕಳು ಸಮವಸ್ತ್ರ/ ಬಟ್ಟೆ ಬದಲಿಸುವುದಕ್ಕೆ ಅವಕಾಶ ನೀಡಬಾರದು, ಈಜುಕೊಳಗಳಲ್ಲಿ ಫೋಟೊ ತೆಗೆಯಬಾರದು, ಶಾಲಾ ಆವರಣಕ್ಕೆ ಸಾಕುಪ್ರಾಣಿಗಳು ಬರದಂತೆ ನೋಡಿಕೊಳ್ಳಬೇಕು, ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಹೈಟೆನ್ಷನ್‌ ವಿದ್ಯುತ್‌ ತಂತಿ ಶಾಲಾ ಆವರಣದಲ್ಲಿ ಹಾದು ಹೋಗಿದ್ದರೆ ಅದನ್ನು ಬೇರೆಡೆಗೆ ಸ್ಥಳಾಂತರಿಸಬೇಕು, ಶಾಲೆಗಳ ಸುತ್ತಮುತ್ತ ವಾಹನಗಳು ಗಂಟೆಗೆ 20 ಕಿ.ಮೀ.ಗಿಂತ ಕಡಿಮೆ ವೇಗದಲ್ಲಿ ಚಲಿಸುವಂತೆ ನೋಡಿಕೊಳ್ಳಬೇಕು ಎಂಬ ಸೂಚನೆಗಳನ್ನು ನೀಡಲಾಗಿದೆ.

ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ಎರಡು ತಿಂಗಳ ಹಿಂದೆ ಸಭೆ ನಡೆಸಿ, ಮಕ್ಕಳ ಸುರಕ್ಷತೆ ಬಗ್ಗೆ ಶಿಫಾರಸು ಮಾಡಲುಇಲಾಖೆಯ ಅಧಿಕಾರಿಗಳಲ್ಲದೆ, ಪೊಲೀಸ್‌, ಆರೋಗ್ಯ, ನಿಮ್ಹಾನ್ಸ್‌ ತಜ್ಞರ ಸಮಿತಿ ರಚಿಸಿದ್ದರು. ಈ ಸಮಿತಿ ನೀಡಿದ ವರದಿ ಆಧರಿಸಿ ಮಕ್ಕಳ ಸುರಕ್ಷತೆಗೆ ಈ ಮಾರ್ಗಸೂಚಿ ಹೊರಡಿಸಲಾಗಿದೆ. ಪೋಕ್ಸೊದಂತಹ ಪ್ರಕರಣಗಳು ಬೆಳಕಿಗೆ ಬಂದರೆ, ದೂರುಗಳು ಬಾರದೆ ಇದ್ದರೂ, ಪೊಲೀಸರು ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.