ADVERTISEMENT

ಬೆಂಗಳೂರು: ಚೀನಾ ಉದ್ಯಮಿಯಿಂದ ₹100 ಕೋಟಿ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 15:52 IST
Last Updated 1 ಆಗಸ್ಟ್ 2025, 15:52 IST
   

ಬೆಂಗಳೂರು: ಚೀನಾದ ಜವಳಿ ಉದ್ಯಮಿ ಪಾಲ್‌ ಪು ಅವರು ಕರ್ನಾಟಕದ ಜವಳಿ ಕ್ಷೇತ್ರದಲ್ಲಿ ₹100 ಕೋಟಿ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. 

ಜವಳಿ ಸಚಿವ ಶಿವಾನಂದ ಪಾಟೀಲ ಅವರನ್ನು ಪಾಲ್ ಪು ಶುಕ್ರವಾರ ಭೇಟಿ ಮಾಡಿ ಜವಳಿ ಉದ್ಯಮ ಸ್ಥಾಪಿಸುವ ಕುರಿತು ಮಾತುಕತೆ ನಡೆಸಿದರು. 

ಆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪಾಟೀಲ ಅವರು, ಪಾಲ್‌ ಪು ಅವರು ಸೆಪ್ಟೆಂಬರ್‌ವರೆಗೆ ಕರ್ನಾಟಕದಲ್ಲೇ ಇದ್ದು, ಯೋಜನಾ ಸ್ಥಳವನ್ನು ಅಂತಿಮಗೊಳಿಸಲಿದ್ದಾರೆ ಎಂದರು.  

ADVERTISEMENT

ಉತ್ತರ ಕರ್ನಾಟಕದಲ್ಲಿ ತಕ್ಷಣಕ್ಕೆ ಅಗತ್ಯ ಮೂಲಸೌಕರ್ಯ ಇರುವ ಭೂಮಿ ಲಭ್ಯವಿದೆ. ವರ್ಷದಲ್ಲಿ 365 ದಿನ ನೀರು, ವಿದ್ಯುತ್‌, ರಾಷ್ಟ್ರೀಯ ಹೆದ್ದಾರಿ, ವಿಮಾನಯಾನ ಸೌಲಭ್ಯ ಇರುವ ಕಡೆ ಅಗತ್ಯ ಪ್ರಮಾಣದ ಭೂಮಿ ಒದಗಿಸಲಾಗುವುದು ಎಂದು ಪಾಟೀಲ ತಿಳಿಸಿದರು.

ಇದಕ್ಕೆ ಸಮ್ಮತಿಸಿದ ಉದ್ಯಮಿ ಪು ಅವರು, ಮೊದಲ ಹಂತದಲ್ಲಿ ಮೈಸೂರು ಭಾಗದಲ್ಲಿ, ಎರಡನೆಯ ಹಂತದಲ್ಲಿ ಉತ್ತರ ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಮೊದಲ ಹಂತದ ಯೋಜನೆಯಲ್ಲಿ ₹100 ಕೋಟಿ ಬಂಡವಾಳ ಹೂಡಿಕೆ ಮಾಡಲಿದ್ದು, ಐದು ಸಾವಿರ ಜನರಿಗೆ ಉದ್ಯೋಗ ನೀಡಲಾಗುವುದು. ತಕ್ಷಣವೇ ಬಂಡವಾಳ ಹೂಡಲು ಸಿದ್ಧರಿದ್ದು, 20 ಎಕರೆ ಭೂಮಿಯ ಅಗತ್ಯವಿದೆ ಎಂದು ಹೇಳಿದರು.

ಉದ್ಯಮ ಸ್ಥಾಪನೆಗೆ ಸೂಕ್ತವಾದ ಸ್ಥಳಗಳನ್ನು ಪಾಲ್‌ ಪು ಅವರಿಗೆ ತೋರಿಸಿ, ಅವರಿಗೆ ಸೂಕ್ತ ಎನಿಸಿದ ನಿವೇಶನ ಮಂಜೂರಾತಿಗೆ ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿ ಭಾಗವಹಿಸಿದ್ದ ಜವಳಿ ಇಲಾಖೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.