ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೃತಪಟ್ಟ 13 ವರ್ಷದ ದಿವ್ಯಾಂಶಿಯ ಮರಣೋತ್ತರ ಪರೀಕ್ಷೆ ವೇಳೆ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸ್ಟಾಲಿನ್ (32) ಬಂಧಿತ. ವಿವೇಕನಗರ ಮಯಾಬಜಾರ್‌ನಲ್ಲಿ ನೆಲಸಿದ್ದ ಆರೋಪಿ, ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ಅರೆಕಾಲಿಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ಬಾಲಕಿಯ ತಾಯಿ ಅಶ್ವಿನಿ ಅವರು ಜುಲೈ 24ರಂದು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳವು ಮಾಡಿದ್ದ ಚಿನ್ನಾಭರಣ ಪತ್ತೆ
ಆಗಿಲ್ಲ ಎಂದು ಪೊಲೀಸರು ತಿಳಿಸಿದರು.
ಆರೋಪಿಗೆ ಮದ್ಯದ ಅಭ್ಯಾಸವಿತ್ತು. ಇದೇ ಕಾರಣಕ್ಕೆ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಜೂನ್ 4ರಂದು ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಬೌರಿಂಗ್ ಅಸ್ಪತ್ರೆಗೆ 6 ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ತರಲಾಗಿತ್ತು. ಹೆಚ್ಚಿನ ಸಿಬ್ಬಂದಿ ಅಗತ್ಯವಿದ್ದ ಕಾರಣಕ್ಕೆ ಸ್ಟಾಲಿನ್‌ನನ್ನು ಕರೆಸಿಕೊಳ್ಳಲಾಗಿತ್ತು. ಆಗ ಚಿನ್ನಾಭರಣ ಕಳವು ಮಾಡಿದ್ದ ಎನ್ನಲಾಗಿದೆ.
ದಿವ್ಯಾಂಶಿಯ ಮರಣೋತ್ತರ ಪರೀಕ್ಷೆಯ ವೇಳೆ ಬಾಲಕಿ ಧರಿಸಿದ್ದ ಸುಮಾರು ₹1 ಲಕ್ಷದ ಮೌಲ್ಯದ 6 ಗ್ರಾಂ ಚಿನ್ನದ ಕಿವಿಯೋಲೆ ಹಾಗೂ 5ರಿಂದ 6 ಗ್ರಾಂ ಚಿನ್ನದ ಸರವನ್ನು ಕದ್ದಿದ್ದ. ಅಂದು ಕೆಲಸ ಮುಗಿದ ಬಳಿಕ ಕದ್ದ ಚಿನ್ನ ಸಮೇತ ಮನೆಗೆ ತೆರಳಿದ್ದ. ಕುಡಿದ ನಶೆಯಲ್ಲಿ ಮಾರ್ಗಮಧ್ಯೆ ಚಿನ್ನಾಭರಣ ಕಳೆದು ಹೋಗಿರುವುದಾಗಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಹೇಳಿದರು.
‘ಮರಣೋತ್ತರ ಪರೀಕ್ಷೆ ವೇಳೆ ಶವಾಗಾರದಲ್ಲಿ ನನ್ನ ಪುತ್ರಿಯ ಕಿವಿಯೋಲೆ ಹಾಗೂ ಚಿನ್ನದ ಸರ ಕಾಣೆಯಾಗಿದೆ. ಪುತ್ರಿಯ ಜನ್ಮದಿನದಂದು ಆಕೆಯ ಮಾವ ಉಡುಗೊರೆ ನೀಡಿದ್ದರು. ಕಿವಿಯೋಲೆಯೊಂದಿಗೆ ದಿವ್ಯಾಂಶಿ ಬಾಂಧವ್ಯ ಹೊಂದಿದ್ದಳು. ಹೀಗಾಗಿ, ನನಗೆ ಆಭರಣ ಬೇಕೆಂದು ಬೌರಿಂಗ್ ಆಸ್ಪತ್ರೆಗೆ ತೆರಳಿ ಕೇಳಿದಾಗ, ಈ ಬಗ್ಗೆ ಯಾರೂ ಸರಿಯಾಗಿ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಬಾಲಕಿಯ ತಾಯಿ ಅಶ್ಚಿನಿ ಅವರು ಪೊಲೀಸರಿಗೆ ದೂರು ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.