ಬೀದರ್: ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳು ನಗರದಲ್ಲಿ ಶುಕ್ರವಾರ ಸಿಐಡಿ ವಿಚಾರಣೆಗೆ ಹಾಜರಾದರು.
ನಗರದ ರೈಲ್ವೆ ಪೊಲೀಸ್ ಠಾಣೆಯಲ್ಲಿ ತಾತ್ಕಾಲಿಕವಾಗಿ ತೆಗೆದಿರುವ ಸಿಐಡಿ ಕಚೇರಿಯಲ್ಲಿ ಡಿಐಜಿಪಿ ಶಾಂತನು ಸಿನ್ಹಾ, ಡಿವೈಎಸ್ಪಿ ಸುಲೇಮಾನ್ ತಹಶೀಲ್ದಾರ್ ಅವರ ಎದುರು ಆರೋಪಿಗಳು ಹಾಜರಾಗಿ ವಿಚಾರಣೆಗೆ ಒಳಗಾದರು.
ರಾಜು ಕಪನೂರ, ಗೋರಖನಾಥ, ನಂದಕುಮಾರ ನಾಗಭುಜಂಗಿ, ರಾಮನಗೌಡ ಪಾಟೀಲ ಹಾಗೂ ಸತೀಶ ವಿಚಾರಣೆಗೆ ಹಾಜರಾದರು. ಸಿಐಡಿ ಅಧಿಕಾರಿಗಳು ಈಗಾಗಲೇ ಸಚಿನ್ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿ, ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಕೊಲೆ ಬೆದರಿಕೆ ಇದೆ ಎಂದು ಆರೋಪಿಸಿ ಸಚಿನ್ ಪಾಂಚಾಳ್ ಡಿ. 26ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್‌ನೋಟ್‌ನಲ್ಲಿ ರಾಜು ಕಪನೂರ ಸೇರಿದಂತೆ ಎಂಟು ಜನರ ಹೆಸರು ಉಲ್ಲೇಖಿಸಿದ್ದರು. ಸಚಿನ್ ಕುಟುಂಬದವರು ನೀಡಿದ ದೂರಿನ ಮೇರೆಗೆ ಒಂಬತ್ತು ಜನರ ವಿರುದ್ಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.