ADVERTISEMENT

ಪಿಎಸ್ಐ ನೇಮಕಾತಿ ಅಕ್ರಮ: ಬಾಯಿಬಿಡದ ಡಿವೈಎಸ್ಪಿ

ಮುಂದುವರಿದ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 22 ಮೇ 2022, 20:10 IST
Last Updated 22 ಮೇ 2022, 20:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಪೊಲೀಸ್ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ವಿಚಾರಣೆ ಮುಂದುವರಿಸಿದ್ದಾರೆ.

ಕೆಲ ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳ ಜೊತೆ ಒಡನಾಟವಿಟ್ಟುಕೊಂಡು ಅಕ್ರಮ ಎಸಗಿದ್ದ ಬಗ್ಗೆ ಪುರಾವೆಗಳಿದ್ದರೂ ಶಾಂತಕುಮಾರ್ ಯಾವುದೇ ಮಾಹಿತಿ ಬಾಯ್ಬಿಡುತ್ತಿಲ್ಲ. ಸಿಐಡಿ ಕಚೇರಿಯಲ್ಲಿ ಭಾನುವಾರವೂ ಶಾಂತಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.

‘ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಡಿವೈಎಸ್ಪಿ ಆಗಿದ್ದ ಶಾಂತಕುಮಾರ್, ನಿಯೋಜನೆ ಮೇರೆಗೆ ಪೊಲೀಸ್ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಪಿಎಸ್ಐ ನೇಮಕಾತಿ ಪ್ರಕ್ರಿಯೆ ಉಸ್ತುವಾರಿ ವಹಿಸಿಕೊಂಡಿದ್ದರು. ಅವರ ಮೂಲಕವೇ ಅಕ್ರಮ ನಡೆದಿರುವುದು ಪುರಾವೆಗಳಿಂದ ಗೊತ್ತಾಗಿದೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳ ಕೈವಾಡವಿದ್ದು, ಅವರ ಹೆಸರುಗಳನ್ನು ಶಾಂತಕುಮಾರ್ ಬಾಯ್ಬಿಡುತ್ತಿಲ್ಲ’ ಎಂದು ಸಿಐಡಿ ಮೂಲಗಳು ಹೇಳಿವೆ.

ADVERTISEMENT

‘ಶಾಂತಕುಮಾರ್ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಹೆಡ್ ಕಾನ್‌ಸ್ಟೆಬಲ್‌ಗಳಾದ ಶ್ರೀಧರ್, ಶ್ರೀನಿವಾಸ್ ಹಾಗೂ ಇತರೆ ನೌಕರನ್ನೂ ಬಂಧಿಸಲಾಗಿದೆ. ಇವರಿಂದ ₹ 2.46 ಕೋಟಿ ಸಹ ಜಪ್ತಿ ಮಾಡಿದೆ. ಈ ಹಣದ ಬಗ್ಗೆಯೂ ಶಾಂತಕುಮಾರ್ ಮಾಹಿತಿ ನೀಡುತ್ತಿಲ್ಲ. ತನಗೇನೂ ಗೊತ್ತಿಲ್ಲವೆಂದೇ ವಾದಿಸುತ್ತಿದ್ದಾರೆ’ ಎಂದೂ ತಿಳಿಸಿವೆ.

‘ಒಎಂಆರ್‌ ಪ್ರತಿ ಸಂಗ್ರಹಿಸಿದ್ದ ಟ್ರಂಕ್‌ಗಳ ಬೀಗದ ಕೀಗಳು ಮನೆಯಲ್ಲಿ ಸಿಕ್ಕ ಬಗೆಗಿನ ಪ್ರಶ್ನೆಗಳಿಗೂ ಶಾಂತಕುಮಾರ್ ಉತ್ತರಿಸುತ್ತಿಲ್ಲ. ಅವರಮನೆಯಲ್ಲಿ ಸಿಕ್ಕಿರುವ ಕೆಲ ಪುರಾವೆಗಳಿಂದ ಮತ್ತಷ್ಟು ಆರೋಪಿಗಳ ಸುಳಿವು ಸಿಕ್ಕಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.