ADVERTISEMENT

ಸಿಗರೇಟ್‌ ಲಂಚ ಪ್ರಕರಣ ಯಾರಿಂದ ನಡೆಸಬೇಕು? ಪೊಲೀಸ್ ಇಲಾಖೆಯಲ್ಲಿ ಜಿಜ್ಞಾಸೆ

​ಪ್ರಜಾವಾಣಿ ವಾರ್ತೆ
Published 13 ಮೇ 2020, 20:15 IST
Last Updated 13 ಮೇ 2020, 20:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಪ್ರತಿಷ್ಠಿತ ಕಂಪನಿಯ ಸಿಗರೇಟ್‌ ವಿತರಕರೊಬ್ಬರಿಂದ ಸಿಸಿಬಿ ಅಧಿಕಾರಿಗಳು ₹ 62.5 ಲಕ್ಷ ವಸೂಲು ಮಾಡಿರುವ ಪ್ರಕರಣದ ತನಿಖೆಯನ್ನು ಯಾರಿಂದ ನಡೆಸಬೇಕು ಎಂಬ ಜಿಜ್ಞಾಸೆ ಪೊಲೀಸ್ ಇಲಾಖೆಯಲ್ಲಿ ಶುರುವಾಗಿದೆ.

ಸಿಗರೇಟ್‌ ಕಂಪನಿಯಿಂದ ಹಣ ವಸೂಲು ಮಾಡಿರುವುದು ವಿಚಾರಣೆ ಯಿಂದ ಖಚಿತವಾಗಿದೆ ಎಂದು ಡಿಜಿ ಮತ್ತು ಐಜಿ ಪ್ರವೀಣ್‌ ಸೂದ್‌ ಅವರಿಗೆ ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ.

ಈ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಇಲ್ಲಿನ ಕಾಟನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಸಿಸಿಬಿ ಎಸಿಪಿ ಪ್ರಭುಶಂಕರ್‌, ಇನ್‌ಸ್ಪೆಕ್ಟರ್‌ಗಳಾದ ನಿರಂಜನ ಕುಮಾರ್‌ ಮತ್ತು ಅಜಯ್‌ ವಿರುದ್ಧ ಸುಲಿಗೆ ಪ್ರಕರಣವೂ ದಾಖಲಾಗಿದೆ.

ADVERTISEMENT

’ಈ ದೂರಿನ ತನಿಖೆಯನ್ನು ಯಾವ ಸಂಸ್ಥೆಯಿಂದ ನಡೆಸಬೇಕು ಎಂಬ ಕುರಿತು ಡಿಜಿ ಪ್ರವೀಣ್‌ ಸೂದ್‌ ಶೀಘ್ರ ನಿರ್ಧಾರ ಕೈಗೊಳ್ಳಲಿದ್ದಾರೆ. ನಮ್ಮ ಪೊಲೀಸ್‌ ಅಧಿಕಾರಿಗಳೇ ತನಿಖೆ ನಡೆಸಬಹುದು. ಆದರೆ, ಸಿಸಿಬಿಯ ಅಧಿಕಾರಿಗಳು ಆರೋಪಿಗಳಾಗಿರುವುದರಿಂದ ಬೇರೆ ಸಂಸ್ಥೆಯಿಂದ ತನಿಖೆ ನಡೆಸುವಂತೆ ಸೂದ್‌ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆಯಿದೆ’ ಎಂದು ಮೂಲಗಳು ತಿಳಿಸಿವೆ.

ಇಲ್ಲಿನ ಶ್ರೀನಗರದ ಸಿಗರೇಟ್‌ ವ್ಯಾಪಾರಿ ಸಂತೋಷ್‌ ಎಂಬುವರಿಂದ ₹15 ಲಕ್ಷ ಪಡೆಯಲಾಗಿದೆ. ಮತ್ತೊಬ್ಬ ಸಿಗರೇಟ್‌ ವಿತರಕರಿಂದ ₹7 ಲಕ್ಷ ವಸೂಲು ಮಾಡಲಾಗಿದೆ. ಅಧಿಕಾರಿ ಗಳಿಗೆ ಹಣ ಕೊಟ್ಟವರ ಹೇಳಿಕೆ ದಾಖಲಿಸಲಾಗಿದೆ. ಆರೋಪಿ‌ಗಳಿಂದ ₹52 ಲಕ್ಷ ಜಪ್ತಿ ಮಾಡಲಾಗಿದೆ. ಇದನ್ನು ವಿಡಿಯೊ ಚಿತ್ರೀಕರಣ ಮಾಡಲಾಗಿದೆ ಎಂದೂ ವಿವರಿಸಿವೆ.

ಸಿಸಿಬಿ ಅಧಿಕಾರಿಗಳಲ್ಲದೆ, ನಗರದ ಕೆಲ ಪೊಲೀಸ್‌ ಅಧಿಕಾರಿಗಳೂ ಸಿಗರೇಟ್‌ ವಿತರಕರಿಂದ ಹಣ ವಸೂಲು ಮಾಡಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಸುಳಿವು ಸಿಕ್ಕಿದೆ. ಆದರೆ, ಈ ಬಗ್ಗೆ ಮಾಹಿತಿ ನೀಡಲು ಯಾರೂ ಮುಂದೆ ಬರುತ್ತಿಲ್ಲ. ಹಿರಿಯ ಅಧಿಕಾರಿಗಳೂ ಹೆಚ್ಚು ತಲೆಕೆಡಿಸಿಕೊಳ್ಳದೆ ತಟಸ್ಥರಾಗಿದ್ದಾರೆ. ಈ ಹಗರಣದ ಬಗ್ಗೆ ಬೇರೆ ಸಂಸ್ಥೆಯಿಂದ ವಿಚಾರಣೆ ನಡೆದರೆ ಪೂರ್ಣ ಸತ್ಯ ಹೊರಬರಲಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.