ADVERTISEMENT

ಕಾರ್ಮಿಕರಿಗೆ ದ್ರೋಹ ಬಗೆದ ರಾಜ್ಯ ಸರ್ಕಾರ: ಸಿಐಟಿಯು

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 15:43 IST
Last Updated 26 ಜನವರಿ 2026, 15:43 IST
   

ಬೆಂಗಳೂರು: ‘ಕೈಗಾರಿಕಾ ಸಂಬಂಧಗಳ (ಕರ್ನಾಟಕ) ಕರಡು ನಿಯಮಗಳನ್ನು ಪ್ರಕಟಿಸುವ ಮೂಲಕ ರಾಜ್ಯ ಸರ್ಕಾರ ಕಾರ್ಮಿಕರಿಗೆ ದ್ರೋಹ ಬಗೆದಿದೆ. ಕಾರ್ಮಿಕ ವಿರೋಧಿಯಾಗಿರುವ ಈ ಕರಡು ನಿಯಮಗಳನ್ನು ಕೂಡಲೇ ಹಿಂಪಡೆಯಬೇಕು’ ಎಂದು ಸಿಐಟಿಯು ರಾಜ್ಯ ಸಮಿತಿಯ ಅಧ್ಯಕ್ಷ ಮೀನಾಕ್ಷಿ ಸುಂದರಂ ಮತ್ತು ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ಆಗ್ರಹಿಸಿದ್ದಾರೆ.

‘ರಾಜ್ಯ ಸರ್ಕಾರವು ಕಾರ್ಮಿಕ ಸಂಘಟನೆಗಳ ಅಭಿಪ್ರಾಯ ಪಡೆಯದೇ ಕೆಲವು ಕಠಿಣ ಷರತ್ತುಗಳನ್ನು ಕರಡು ನಿಯಮಗಳಲ್ಲಿ ಸೇರಿಸಿದೆ. ಕಾರ್ಮಿಕರ ಸಂವಿಧಾನಬದ್ಧ ಹಕ್ಕುಗಳನ್ನು ಮೊಟಕುಗೊಳಿಸಿದೆ. ಕಾರ್ಮಿಕ ಸಂಘದ ನೋಂದಣಿ ಶುಲ್ಕವನ್ನು ₹10ರಿಂದ ₹1 ಸಾವಿರಕ್ಕೆ ಹೆಚ್ಚಿಸಿದೆ. ಸಂಘದ ನೋಂದಣಿಗೆ ಅರ್ಜಿ ಸಲ್ಲಿಸಿದ ನಂತರ ಅಧಿಕಾರಿಗಳು ವಿವರಣೆ ಕೇಳಿ ನೀಡುವ ಪ್ರತಿ ನೋಟಿಸ್‌ಗೆ ₹100 ಶುಲ್ಕ ನಿಗದಿಪಡಿಸಿದೆ’ ಎಂದು ದೂರಿದ್ದಾರೆ. 

‘ಮಾನ್ಯತೆ ಪಡೆದ ಕಾರ್ಮಿಕ ಸಂಘ ಅಥವಾ ಜಂಟಿ ಚೌಕಾಶಿ ಸಮಿತಿಗಳಿದ್ದರೂ ವರ್ಕ್ಸ್‌ ಕಮಿಟಿ, ಅಹವಾಲು ಸಮಿತಿಗಳನ್ನು ರಚಿಸಲು ಮಾಲೀಕರಿಗೆ ಅವಕಾಶ ನೀಡಿದೆ. ಕಾರ್ಮಿಕ ಸಂಘಗಳು ಸದಸ್ಯರಿಂದ ವಾರ್ಷಿಕ ವಂತಿಗೆ ರೂಪದಲ್ಲಿ ಸಂಗ್ರಹಿಸುವ ಶುಲ್ಕದ ಮೇಲೆ ನಿರ್ಬಂಧ ವಿಧಿಸಿದೆ. ಸಂಘದ ನಿಧಿ ಬಳಕೆಯ ಮೇಲೆ ನಿರ್ಬಂಧವನ್ನು ಹೇರಿದೆ’ ಎಂದು ತಿಳಿಸಿದ್ದಾರೆ.  

ADVERTISEMENT

‘ಕಾರ್ಮಿಕರ ಮುಷ್ಕರದ ಹಕ್ಕನ್ನು ಕಠಿಣಗೊಳಿಸಲಾಗಿದೆ. ಕಾರ್ಮಿಕ ಕಾನೂನುಗಳ ಉಲ್ಲಂಘನೆಗಳಿಂದ ಮಾಲೀಕರಿಗೆ ವಿಧಿಸುವ ದಂಡ ಮತ್ತು ಶಿಕ್ಷೆಯಿಂದ ಪಾರು ಮಾಡಲು ಅಧಿಕಾರಿಗಳ ನೇಮಕಕ್ಕೆ ಅವಕಾಶ ಕಲ್ಪಿಸಿದೆ’ ಎಂದು ಆರೋಪಿಸಿದ್ದಾರೆ. 

‘ಕೇಂದ್ರ ಸರ್ಕಾರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಿರಸ್ಕರಿಸುವ, ಮಾರ್ಪಡಿಸುವ, ಹೊಸದಾಗಿ ಕಾನೂನು ರೂಪಿಸುವ ಸಂವಿಧಾನಬದ್ಧ ಅಧಿಕಾರವನ್ನು ಬಳಸುವ ಹೊಣೆಗಾರಿಕೆಯನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರ ಪ್ರದರ್ಶಿಸಿಲ್ಲ. ನಾಲ್ಕು ಕಾರ್ಮಿಕ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಫೆ.12ರಂದು ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು‌’ ಎಂದು ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.