ADVERTISEMENT

ಹೊಸ ವರ್ಷಾಚರಣೆ: ನಿಷೇಧಾಜ್ಞೆ ಜಾರಿಗೆ ಚಿಂತನೆ

ಜನ ಜಂಗುಳಿಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 19:31 IST
Last Updated 26 ಡಿಸೆಂಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸೇರುವ ಜನಜಂಗುಳಿಯಿಂದಾಗಿ ಕೊರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲು ನಗರ ಪೊಲೀಸರು ಚಿಂತನೆ ನಡೆಸಿದ್ದಾರೆ.

‘ಇದೇ 30ರ ಸಂಜೆಯಿಂದ 2021ರ ಜ 1ರ ಮುಂಜಾನೆವರೆಗೂ ಅಪರಾಧ ದಂಡ ಪ್ರಕಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 144 ಜಾರಿಗೊಳಿಸಲು ಸಿದ್ಧತೆ ನಡೆದಿದೆ. ಈ ಬಗ್ಗೆ ಚರ್ಚಿಸಲು ನಗರ ಪೊಲೀಸ್‌ ಕಮಿಷನರ್‌ ಕಮಲ್‌ಪಂತ್‌ ಅವರು ಡಿಸಿಪಿ ದರ್ಜೆಗಿಂತ ಮೇಲಿನ ಅಧಿಕಾರಿಗಳ ಸಭೆಯನ್ನು ಸೋಮವಾರ ನಡೆಸಲಿದ್ದಾರೆ. ಈ ಬಗ್ಗೆ ಮಂಗಳವಾರ ಆದೇಶ ಪ್ರಕಟಿಸುವ ಸಾಧ್ಯತೆ ಇದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಕೋವಿಡ್‌ 19 ನಿಯಂತ್ರಣದ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಿಷೇಧಾಜ್ಞೆಯ ಮಾರ್ಗಸೂಚಿಗಳನ್ನು ರೂಪಿಸಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಪಾರ್ಟಿಗಳಲ್ಲಿ ತಡರಾತ್ರಿವರೆಗೂ ನಾಲ್ವರಿಗಿಂತ ಹೆಚ್ಚು ಜನ ಒಟ್ಟಿಗೆ ಸೇರುವಂತಿಲ್ಲ. ಬ್ರಿಟನ್‌ನಿಂದ ಮರಳಿರುವವರಲ್ಲಿ ರೂಪಾಂತರಗೊಂಡಿರುವ ಕೊರೊನಾ ವೈರಾಣು ಕಾಣಿಸಿಕೊಂಡಿರುವ ಬಗ್ಗೆ ಕಳೆದ ಕೆಲವು ದಿನಗಳಿಂದ ಆತಂಕ ಮನೆ ಮಾಡಿದೆ. ಹಾಗಾಗಿ ಕೋವಿಡ್‌ ಹರಡದಂತೆ ಕ್ರಮ ಕೈಗೊಳ್ಳಬೇಕಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ನಗರದ ಎಲ್ಲ ಪೊಲೀಸ್‌ ಸಿಬ್ಬಂದಿ ಈ ಎರಡೂ ದಿನಗಳಲ್ಲಿ ಕರ್ತವ್ಯದಲ್ಲಿರಲಿದ್ದಾರೆ. ಈ ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.