ADVERTISEMENT

ಸಿವಿಲ್‌, ಮೆಕ್ಯಾನಿಕಲ್‌ ಕೋರ್ಸ್‌: ಬೇಡಿಕೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 16 ಮೇ 2025, 15:59 IST
Last Updated 16 ಮೇ 2025, 15:59 IST
   

ಬೆಂಗಳೂರು: ಕೆಲ ವರ್ಷಗಳಿಂದ ಬೇಡಿಕೆ ಕಳೆದುಕೊಂಡಿದ್ದ ಸಿವಿಲ್‌, ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಮರಳಿ ಬೇಡಿಕೆ ಬಂದಿದ್ದು, ಬಹುತೇಕ ಕಾಲೇಜುಗಳಲ್ಲಿ ಆಡಳಿತ ಮಂಡಳಿ ಕೋಟಾದ ಸೀಟುಗಳು ಭರ್ತಿಯಾಗಿವೆ.

ಕೋವಿಡ್‌ ನಂತರ ಎರಡೂ ಕೋರ್ಸ್‌ಗಳ ಬೇಡಿಕೆ ಕುಸಿದು, ಸೀಟುಗಳು ಖಾಲಿ ಉಳಿಯುತ್ತಿದ್ದವು. ಕೆಲ ಕಾಲೇಜುಗಳಲ್ಲಿ ಕೋರ್ಸ್‌ಗಳನ್ನೇ ಮುಚ್ಚಲಾಗಿತ್ತು. ಈ ಬಾರಿ ಆಡಳಿತ ಮಂಡಳಿ ಕೋಟಾದ ಸೀಟುಗಳ ಶುಲ್ಕವನ್ನು ₹20 ಲಕ್ಷದಿಂದ ₹30 ಲಕ್ಷದವರೆಗೆ ನಿಗದಿ ಮಾಡಿದ್ದರೂ, ಎಲ್ಲ ಸೀಟುಗಳು ಭರ್ತಿಯಾಗಿವೆ. ಇನ್ನೂ ಬೇಡಿಕೆ ಬರುತ್ತಿವೆ ಎಂದು ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಹೇಳಿವೆ.

‘ಖಾಸಗಿ ಕಾಲೇಜುಗಳ ಜತೆಗೆ ಸರ್ಕಾರಿ ಕಾಲೇಜು ಹಾಗೂ ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೂ ಬೇಡಿಕೆ ಬರುತ್ತಿದ್ದು, ಸಿಇಟಿ ರ್‍ಯಾಕಿಂಗ್‌ ಪ್ರಕಟವಾದ ನಂತರ ಸಿವಿಲ್‌, ಮೆಕ್ಯಾನಿಕಲ್‌ ವಿಭಾಗಗಳ ಎಲ್ಲ ಸೀಟುಗಳು ಭರ್ತಿಯಾಗಬಹುದು. ನಿರ್ಮಾಣ ಕ್ಷೇತ್ರದ ಚೇತರಿಕೆ, ತಯಾರಿಕಾ ಉದ್ಯಮ, ರಕ್ಷಣಾ ವಲಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ನಿರ್ವಹಣಾ ಕೋಟಾದಡಿಯಲ್ಲಿ ಯಾಂತ್ರಿಕ ಶಾಖೆಗಳಿಗೆ ಪ್ರವೇಶ ಸುಧಾರಿಸಿರುವುದು ಬೇಡಿಕೆ ಹೆಚ್ಚಳಕ್ಕೆ ಕಾರಣ ಇರಬಹುದು’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎಸ್. ವಿದ್ಯಾಶಂಕರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.