ADVERTISEMENT

ಸಂತ್ರಸ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದರು!

ಮಧ್ಯರಾತ್ರಿ ಬಾಲಮಂದಿರ ಸಮೀಪದ ಕಟ್ಟಡಕ್ಕೆ ಕಳುಹಿಸುತ್ತಿದ್ದ ಭದ್ರತಾ ಸಿಬ್ಬಂದಿ

ಈರಪ್ಪ ಹಳಕಟ್ಟಿ
Published 28 ಮಾರ್ಚ್ 2019, 19:01 IST
Last Updated 28 ಮಾರ್ಚ್ 2019, 19:01 IST
ಚಿಕ್ಕಬಳ್ಳಾಪುರದಲ್ಲಿರುವ ಮಕ್ಕಳ ಕಲ್ಯಾಣ ಸಮಿತಿ ಕಚೇರಿ
ಚಿಕ್ಕಬಳ್ಳಾಪುರದಲ್ಲಿರುವ ಮಕ್ಕಳ ಕಲ್ಯಾಣ ಸಮಿತಿ ಕಚೇರಿ   

ಚಿಕ್ಕಬಳ್ಳಾಪುರ: ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂತ್ರಸ್ತ ಬಾಲಕಿಯರಿಗೆ ನೆಲೆ ಒದಗಿಸಿ ಪುನರ್ವಸತಿ ಕಲ್ಪಿಸಬೇಕಾದ ಬಾಲಕಿಯರ ಸರ್ಕಾರಿ ಬಾಲ ಮಂದಿರದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ವೇಶ್ಯಾವಾಟಿಕೆಗೆ ತಳ್ಳಿದ ಘಟನೆ ಬಯಲಾಗಿದೆ.

ನಗರದ ನಗರ್ತಪೇಟೆ ಮುಖ್ಯರಸ್ತೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಲಕಿಯರ ಸರ್ಕಾರಿ ಬಾಲ ಮಂದಿರದಲ್ಲಿ ‘ಪೊಕ್ಸೊ’ (ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ಕಾಯ್ದೆ-2012) ಪ್ರಕರಣಗಳ ಅಡಿ ನಾಲ್ಕು ಬಾಲಕಿಯರು ಪುನರ್ವಸತಿ ಪಡೆದಿದ್ದಾರೆ.

ಅವರನ್ನು ಕಾವಲು ಕಾಯುವ ಮಹಿಳಾ ಸಿಬ್ಬಂದಿಯೊಬ್ಬರು ಆರು ತಿಂಗಳಿಂದ ಮಧ್ಯರಾತ್ರಿ ಪರಪುರುಷರ ಜತೆಗೆ ಕಳುಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ADVERTISEMENT

ಬಾಲಮಂದಿರದಲ್ಲಿದ್ದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಮಕ್ಕಳ ಕಲ್ಯಾಣ ಸಮಿತಿಯು (ಸಿಡಬ್ಲೂಸಿ) ಒಂದೂವರೆ ತಿಂಗಳ ಹಿಂದೆ ಕನಕಪುರದ ವೃತ್ತಿ ಶಿಕ್ಷಣ ತರಬೇತಿ ಕೇಂದ್ರಕ್ಕೆ ನಾಲ್ಕು ಬಾಲಕಿಯರನ್ನು ಕಳುಹಿಸಿಕೊಟ್ಟಿತ್ತು. ಆ ಪೈಕಿ ಇಬ್ಬರು ಬಾಲಕಿಯರು 15 ದಿನಗಳಲ್ಲಿಯೇ ನಾಪತ್ತೆಯಾಗಿದ್ದರು. ಈ ಬಗ್ಗೆ ಸಿಡಬ್ಲೂಸಿ ಕನಕಪುರ ಪೊಲೀಸರಿಗೆ ದೂರು ನೀಡಿತ್ತು.

ಕಾಣೆಯಾದ ಬಾಲಕಿಯರ ಪತ್ತೆಗೆ ಪೊಲೀಸರು ತನಿಖೆ ನಡೆಸಿದಾಗ ಇಬ್ಬರು ಚಿಕ್ಕಬಳ್ಳಾಪುರ ಬಾಲಮಂದಿರದ ಬಳಿಯ ವಾಣಿಜ್ಯ ಸಂಕೀರ್ಣವೊಂದರ ಬಾಡಿಗೆ ಕೊಠಡಿಯಲ್ಲಿ ಇದ್ದುದು ಗೊತ್ತಾಗಿದೆ. ಬಾಲಕಿಯರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಬಾಲಮಂದಿರದಲ್ಲಿ ನಡೆಯುತ್ತಿದ್ದ ಅಕ್ರಮ ದಂಧೆಯ ಬಗ್ಗೆ ಬಾಯ್ಬಿಟ್ಟಿದ್ದಾರೆ.

ನಾಲ್ಕು ಬಾಲಕಿಯರನ್ನು ಚಿಕ್ಕಬಳ್ಳಾಪುರದ ಬಾಲಮಂದಿರಕ್ಕೆ ಇತ್ತೀಚೆಗೆ ವಾಪಸ್‌ ಕರೆತರಲಾಗಿತ್ತು. ಒಂದು ವಾರದಲ್ಲಿಯೇ ಅವರಲ್ಲಿ ಇಬ್ಬರು ಪರಾರಿಯಾಗಿದ್ದು, ಈವರೆಗೆ ಸಿಕ್ಕಿಲ್ಲ.

ಪ್ರಕರಣ ತೀವ್ರ ಸ್ವರೂಪ ಪಡೆಯುವುದನ್ನು ಅರಿತ ಸಿಡಬ್ಲೂಸಿ ಅಧ್ಯಕ್ಷೆ ಮೇರಿ ಚೆಲ್ಲದುರೈ ಮತ್ತು ಸದಸ್ಯರು ಮಂಗಳವಾರ ಇಬ್ಬರು ಸಂತ್ರಸ್ತ ಬಾಲಕಿಯರ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ.

‘ಮಂದಿರದ ಕಾವಲು ಸಿಬ್ಬಂದಿ ಭಾಗ್ಯಮ್ಮ, ರಾತ್ರಿ ನಮ್ಮನ್ನು ಕಟ್ಟಡದ ಹಿಂಭಾಗದಿಂದ ಹೊರಗೆ ಕಳುಹಿಸಿ ಸಮೀಪದ ಕಟ್ಟಡಕ್ಕೆ ಹೋಗುವಂತೆ ಹೇಳುತ್ತಿದ್ದರು. ಕಟ್ಟಡದ ಎರಡನೇ ಮಹಡಿಗೆ ಹೋದರೆ ಸರೋಜಮ್ಮ ಎಂಬುವವರು ನಮ್ಮನ್ನು ಅಲ್ಲಿಗೆ ಬರುತ್ತಿದ್ದ ಹುಡುಗರೊಂದಿಗೆ ಕೊಠಡಿ ಒಳಗೆ ಕಳುಹಿಸುತ್ತಿದ್ದರು. ವಾಪಸ್ ಕಳುಹಿಸುವಾಗ ಸ್ವಲ್ಪ ಹಣ ಕೊಡುತ್ತಿದ್ದರು. ನಮ್ಮ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆದಿದೆ’ ಎಂದು ಬಾಲಕಿಯರು ಹೇಳಿದ್ದಾರೆ ಎನ್ನಲಾಗಿದೆ.

ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಾಲ ಮಂದಿರದ ಅಧೀಕ್ಷಕ ನಾಗಭೂಷಣಾಚಾರಿ ಬುಧವಾರ ರಾತ್ರಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಂಧನ: ಹೊರಗುತ್ತಿಗೆ ಭದ್ರತಾ ಸಿಬ್ಬಂದಿ ಭಾಗ್ಯಮ್ಮ ಮತ್ತು ಸಮೀಪದ ಕಟ್ಟಡದಲ್ಲಿ ಬಾಡಿಗೆ ಇರುವ ಸರೋಜಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗುರುವಾರ ಸಂಜೆ ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

*ಕೆಲವರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಬಾಲಕಿಯೊಬ್ಬಳು ಹೇಳಿಕೆ ನೀಡಿದ್ದಾಗಿ ಬಾಲಮಂದಿರದ ಸಿಬ್ಬಂದಿ ದೂರಿನಲ್ಲಿ ತಿಳಿಸಿದ್ದಾರೆ

– ಸುದರ್ಶನ್, ಸರ್ಕಲ್ ಇನ್‌ಸ್ಪೆಕ್ಟರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.