ADVERTISEMENT

ಕೊಠಡಿ 1, ತರಗತಿ 5, ವಿದ್ಯಾರ್ಥಿಗಳು 76! ವಿದ್ಯಾರ್ಥಿಗಳ ಪರದಾಟ

ಆರ್‌. ಹೊಸಳ್ಳಿ ತಾಂಡಾದ ಶಾಲೆಯಲ್ಲಿ ಜಾಗದ ಕೊರತೆ,

ಬಿ.ಜಿ.ಪ್ರವೀಣಕುಮಾರ
Published 19 ಜನವರಿ 2020, 20:51 IST
Last Updated 19 ಜನವರಿ 2020, 20:51 IST
ಮಕ್ಕಳು ಪಾಠ ಕೇಳುವ ಸಂದರ್ಭದಲ್ಲಿ ಅಲ್ಲಿಯೇ ಬಿಸಿಯೂಟ ಸಿದ್ಧಪಡಿಸುತ್ತಿರುವುದು - -------ಚಿತ್ರ: ರಾಜಕುಮಾರ ನಳ್ಳಿಕರ
ಮಕ್ಕಳು ಪಾಠ ಕೇಳುವ ಸಂದರ್ಭದಲ್ಲಿ ಅಲ್ಲಿಯೇ ಬಿಸಿಯೂಟ ಸಿದ್ಧಪಡಿಸುತ್ತಿರುವುದು - -------ಚಿತ್ರ: ರಾಜಕುಮಾರ ನಳ್ಳಿಕರ   

ಯಾದಗಿರಿ: ತಾಲ್ಲೂಕಿನ ಆರ್‌.ಹೊಸಳ್ಳಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿಯ 76 ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಕುಳಿತು ವ್ಯಾಸಂಗ ಮಾಡುತ್ತಿದ್ದಾರೆ.

ಇಲ್ಲಿರುವಬೆಂಚ್‌ಗಳ ಒಂದೊಂದು ಸಾಲಿನಲ್ಲಿ ಒಂದೊಂದು ತರಗತಿಯ ವಿದ್ಯಾರ್ಥಿಗಳು ಕುಳಿತುಕೊಳ್ಳುತ್ತಾರೆ. ಈ ಶಾಲೆಗೆ ಒಂದೇ ಕೊಠಡಿ ಇದ್ದು, ಬಿಸಿಯೂಟ ತಯಾರಿ ಕೂಡ ಅಲ್ಲೇ ನಡೆಯುತ್ತದೆ. ಸಿಲಿಂಡರ್‌, ಗ್ಯಾಸ್‌ ಸ್ಟೌ, ಅಡುಗೆ ಸಾಮಗ್ರಿ, ಮುಖ್ಯ ಶಿಕ್ಷಕರ ಕುರ್ಚಿ, ಟೇಬಲ್‌, ಬೋರ್ಡ್‌ ಇವೆಲ್ಲಕ್ಕೂ ಒಂದೇ ಕೊಠಡಿ!

ಒಬ್ಬ ಪ್ರಭಾರ ಮುಖ್ಯ ಶಿಕ್ಷಕ, ಒಬ್ಬ ಸಹ ಶಿಕ್ಷಕ, ಮುಖ್ಯ ಅಡುಗೆಯವರು, ಸಹಾಯಕರು ಇದ್ದಾರೆ. ಹೆಣ್ಣುಮಕ್ಕಳ ಶೌಚಾಲಯ ಇದ್ದು, ಗಂಡು ಮಕ್ಕಳಿಗೆ ಬಯಲೇ ಗತಿ.

ADVERTISEMENT

‘ಬೇಗ ಬಂದರೆ ಮಾತ್ರ ನಮಗೆ ಬೆಂಚ್‌ನಲ್ಲಿ ಜಾಗ ಸಿಗುತ್ತದೆ. ತಡವಾದರೆ ಕೆಳಗೆ ಕುಳಿತುಕೊಳ್ಳಬೇಕು’ ಎಂದು ವಿದ್ಯಾರ್ಥಿಶಿವಕುಮಾರ ಹೇಳಿದ.

‘ಮಳೆಗಾಲದಲ್ಲಿ ಮಾತ್ರ ಎಲ್ಲ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಪಾಠ ಮಾಡಲಾಗುತ್ತದೆ. ಹೀಗಾಗಿ ಒಂದನೇ ತರಗತಿಯ ಪಾಠವನ್ನು ಐದನೇ ತರಗತಿಯ ಮಕ್ಕಳು ಕೇಳುವ ಅನಿವಾರ್ಯತೆ ಇದೆ. ಉಳಿದ ವೇಳೆ ಶಾಲೆಯ ಸಮೀಪದ ಮರಗಳ ನೆರಳಿನಲ್ಲಿ ಮಕ್ಕಳಿಗೆ ಪಾಠ ಮಾಡುತ್ತೇವೆ’ ಎಂದು ಶಿಕ್ಷಕರು ಹೇಳಿದರು.

‘ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇದೆ. ಖಾಸಗಿಯವರು ಶಾಲೆಗೆ ಜಮೀನು ನೀಡಿದರೆ ಅವರ ಮನೆಯ ಒಬ್ಬರನ್ನು ಬಿಸಿಯೂಟದ ಸಹಾಯಕರ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಎಂಬುದು ನಮ್ಮ ಬೇಡಿಕೆ. ಆದರೆ, ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂಬುದು ಎಸ್‌ಡಿಎಂಸಿ ಅಧ್ಯಕ್ಷಲಚ್ಚಪ್ಪ ಮಲ್ಲೇಶ ತಿಳಿಸಿದರು.

‘ಅಡುಗೆ ಅನಿಲದ ಸಿಲಿಂಡರ್ ಮತ್ತು ಒಲೆಯ ಪಕ್ಕದಲ್ಲಿಯೇ ಮಕ್ಕಳು ಕುಳಿತುಕೊಳ್ಳುತ್ತಾರೆ. ಇದರಿಂದ ನಮ್ಮಲ್ಲಿ ಭಯವೂ ಇದೆ. ಆದರೆ, ಅಸಹಾಯಕರಾಗಿದ್ದೇವೆ. ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ’ ಎಂದು ಮುಖ್ಯಶಿಕ್ಷಕಮಲ್ಲಪ್ಪ ಕೆರೂರು ಹೇಳಿದರು.

*
ಸರ್ಕಾರಿ ಜಾಗ ಇಲ್ಲದ್ದರಿಂದ ಹೆಚ್ಚುವರಿ ಕೊಠಡಿ ನಿರ್ಮಾಣ ಸಾಧ್ಯವಾಗಿಲ್ಲ. ಒಂದೇ ಕೊಠಡಿಯಲ್ಲಿ ಐದು ತರಗತಿಗಳ ವಿದ್ಯಾರ್ಥಿಗಳು ಪಾಠ ಕೇಳುವುದು ನಮ್ಮ ಗಮನಕ್ಕೆ ಬಂದಿದೆ. ‌
–ಚಂದ್ರಕಾಂತ ರೆಡ್ಡಿ, ಬಿಇಒ

*
ಶಿಕ್ಷಕರು ಪಾಠ ಮಾಡುತ್ತಿದ್ದರೆ, ಅಲ್ಲೇ ಬಿಸಿಯೂಟ ತಯಾರಿಕೆ ಆರಂಭಗೊಳ್ಳುತ್ತದೆ. ಪಾತ್ರೆ, ಗ್ಯಾಸ್‌ ಒಲೆ ಶಬ್ದವೂ ಕೇಳಿಸುತ್ತದೆ. ಇದರಿಂದ ಕಲಿಕೆಗೆ ತೊಂದರೆಯಾಗಿದೆ.
–ಶಿಲ್ಪಾ ಚವ್ಹಾಣ, ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.