ADVERTISEMENT

ರಾಮಮಂದಿರ ಸ್ಫೋಟಕ್ಕೆ ಪಿಎಫ್ಐ ಸಂಚು ಆರೋಪದ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 13:29 IST
Last Updated 20 ಅಕ್ಟೋಬರ್ 2022, 13:29 IST
ಬೊಮ್ಮಾಯಿ
ಬೊಮ್ಮಾಯಿ    

ಬೆಂಗಳೂರು: ‘ದೇಶದ ಅಸ್ಮಿತೆಗೆ ಧಕ್ಕೆ ತರುವ ಪಿಎಫ್ಐ ಸಂಚು ಬಯಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.

‘ಅಯೋಧ್ಯೆಯ ರಾಮಮಂದಿರ ಸ್ಫೋಟಕ್ಕೆ ಪಿಎಫ್ಐ ಸಂಚು ಮಾಡಿತ್ತು’ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ‌, ‘ಪಿಎಫ್ಐ ಸಂಘಟನೆ ಒಂದು ದೇಶದ್ರೋಹಿ ಸಂಘಟನೆ. ದೇಶವ್ಯಾಪಿ ವಿಧ್ವಂಸಕ ಹಾಗೂ ಭಯೋತ್ಪಾದನೆ ಕೃತ್ಯಗಳನ್ನು ಮಾಡುತ್ತಿದೆ’ ಎಂದರು.

‘ಈ ಹಿಂದೆ ಮುಂಬೈನಲ್ಲಿ ಸರಣಿ ಬಾಂಬ್ ಸ್ಪೋಟ ಸಂಭವಿಸಿದಂತೆ, ಏಕಕಾಲದಲ್ಲಿ ವಿವಿಧ ಕಡೆ ದುಷ್ಕೃತ್ಯಗಳನ್ನು ನಡೆಸುವ ಪಿಎಫ್‌ಐ ಷಡ್ಯಂತ್ರ ಈಗಾಗಲೇ ಬಯಲಾಗಿದೆ. ದೇಶದ ಅಸ್ಮಿತೆಯನ್ನು ಪ್ರತಿನಿಧಿಸುವಂಥ ಕಟ್ಟಡಗಳನ್ನು ಧ್ವಂಸ ಮಾಡುವ ಮೂಲಕ ಭಾರತದ ಅಸ್ಮಿತೆಗೆ ಧಕ್ಕೆ ತರುವುದು ಆ ಸಂಘಟನೆಯ ಹುನ್ನಾರ’ ಎಂದರು.

ADVERTISEMENT

‘ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ವಿಚಾರವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.