ADVERTISEMENT

ವಕ್ಫ್ ಆಸ್ತಿ ಕಬಳಿಕೆ ತನಿಖೆ ಶೀಘ್ರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 20:48 IST
Last Updated 19 ಅಕ್ಟೋಬರ್ 2022, 20:48 IST
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮಹಾಗಾಂವನಲ್ಲಿ ಬುಧವಾರ ಜನಸಂಕಲ್ಪ ಯಾತ್ರೆ ನಡೆಯುತ್ತಿದ್ದ ವೇಳೆ ಸುರಿದ ಮಳೆಯ ನಡುವೆಯೇ ಜನರು ಭಾಷಣ ಆಲಿಸಿದರು
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮಹಾಗಾಂವನಲ್ಲಿ ಬುಧವಾರ ಜನಸಂಕಲ್ಪ ಯಾತ್ರೆ ನಡೆಯುತ್ತಿದ್ದ ವೇಳೆ ಸುರಿದ ಮಳೆಯ ನಡುವೆಯೇ ಜನರು ಭಾಷಣ ಆಲಿಸಿದರು   

ಮಹಾಗಾಂವ (ಕಲಬುರಗಿ ಜಿಲ್ಲೆ): ‘ವಕ್ಫ್ ಮಂಡಳಿಗೆ ಸೇರಿದ್ದ ಸಾವಿರಾರು ಎಕರೆ ಆಸ್ತಿಯನ್ನು ಕಾಂಗ್ರೆಸ್ ನಾಯಕರು ನುಂಗಿದ್ದು, ಆಸ್ತಿ ಕಬಳಿಕೆ ಆರೋಪ ಕುರಿತು ಅನ್ವರ್ ಮಾಣಿಪ್ಪಾಡಿ ಆಯೋಗ ಸಲ್ಲಿಸಿದ ವರದಿಯಂತೆ ಶೀಘ್ರವೇ ತನಿಖೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಲಬುರಗಿ ಜಿಲ್ಲೆ ಕಮಲಾಪುರ ತಾಲ್ಲೂಕಿನ ಮಹಾಗಾಂವನಲ್ಲಿ ಬುಧವಾರ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು, ಕಲಬುರಗಿ ಸೇರಿ ರಾಜ್ಯದ ಹಲವೆಡೆ ವಕ್ಫ್‌ ಆಸ್ತಿಯನ್ನು ಕಾಂಗ್ರೆಸ್‌ ನಾಯಕರು ತಮ್ಮ ಹಾಗೂ ತಮ್ಮ ಸಹೋದರರ ಹೆಸರಿಗೆ ಮಾಡಿಕೊಂಡಿದ್ದಾರೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಲಾಗುವುದು‌’ ಎಂದರು.

‘ಹಿಮಾಚಲ ಪ್ರದೇಶ, ಗುಜರಾತ್‌ನಲ್ಲಿ ಚುನಾವಣೆ ನಡೆಯುತ್ತಿದೆ. ಯುದ್ಧ ಭೂಮಿ ಬಿಟ್ಟು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ
ಅವರು ಬೇರೆಡೆ ಪಾದಯಾತ್ರೆ ಮಾಡುತ್ತಿದ್ದಾರೆ. ಜನ ಸಂಕಲ್ಪ ಯಾತ್ರೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ. 2023ರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ’ ಎಂದರು.

ADVERTISEMENT

20 ನಿಮಿಷಗಳಲ್ಲಿ ಮುಗಿದ ಕಾರ್ಯಕ್ರಮ: ಮಹಾಗಾಂವನಲ್ಲಿ ಮಧ್ಯಾಹ್ನ ಕಾರ್ಯಕ್ರಮ ಶುರುವಾಗುವುದಕ್ಕೂ ಮುನ್ನವೇ ಗುಡುಗು ಸಹಿತ ಮಳೆ ಶುರುವಾಯಿತು. ಮುಖ್ಯಮಂತ್ರಿ ಅವರ 9 ನಿಮಿಷಗಳ ಭಾಷಣವನ್ನು ಜನರು ಮಳೆಯಲ್ಲೇ ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.