ADVERTISEMENT

ಸಂಪುಟ ವಿಸ್ತರಣೆ| ಅಗತ್ಯ ಇದ್ದರೆ ದೆಹಲಿಗೆ: ಸಿಎಂ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 17:43 IST
Last Updated 4 ನವೆಂಬರ್ 2020, 17:43 IST
ಯಡಿಯೂರಪ್ಪ
ಯಡಿಯೂರಪ್ಪ   

ಬೆಂಗಳೂರು: ಉಪ ಚುನಾವಣೆ ಮುಗಿದ ಬೆನ್ನಲ್ಲೆ ಸಂಪುಟ ವಿಸ್ತರಣೆ ವಿಷಯ ಮುನ್ನೆಲೆಗೆ ಬಂದಿದೆ.

ಈ ಮಧ್ಯೆಯೇ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಕರೆ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಈ ಕುರಿತು ಚರ್ಚೆಯನ್ನೂ ನಡೆಸಿದ್ದಾರೆ.

ಮಂಗಳೂರಿನಲ್ಲಿ ಗುರುವಾರ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ತೆರಳುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಯಡಿಯೂರಪ್ಪ, ‘ಸಚಿವ ಸಂಪುಟ ವಿಸ್ತರಣೆ ಕುರಿತಂತೆ ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸುವ ಅಗತ್ಯವಿದ್ದರೆ ದೆಹಲಿಗೆ ಹೋಗುತ್ತೇನೆ. ಜೆ.ಪಿ ನಡ್ಡಾ ಅವರು ನಿನ್ನೆ (ಅ.3) ಕರೆ ಮಾಡಿ ಮಾತನಾಡಿದ್ದಾರೆ’ ಎಂದರು.

ADVERTISEMENT

‘ಉಪ ಚುನಾವಣೆ ನಡೆದ ಎರಡು ಕ್ಷೇತ್ರಗಳ ಮತ ಎಣಿಕೆ ಇದೇ 11ರಂದು ನಡೆಯಲಿದೆ. ಮರುದಿನ ದೆಹಲಿಗೆ ಹೋಗುತ್ತೀರಾ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಆ ಬಗ್ಗೆ ಇನ್ನೂ ನಿರ್ಧರಿಸಿಲ್ಲ’ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಸಿ.ಟಿ. ರವಿ, ತಮ್ಮ ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ಅವರಿಂದ ತೆರವಾಗುವ ಸ್ಥಾನವೂ ಸೇರಿದಂತೆ ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ಆದಷ್ಟು ಬೇಗ ಭರ್ತಿ ಮಾಡುವ ಇಂಗಿತವನ್ನು ಈಗಾಗಲೇ ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳು ನಡೆದ ವಿಧಾನಮಂಡಲ ಅಧಿವೇಶನಕ್ಕೂ ಮೊದಲು ದೆಹಲಿಗೆ ಹೋಗಿದ್ದ ಅವರು, ಈ ಬಗ್ಗೆ ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿದ್ದರು.

‘ಸಿದ್ದರಾಮಯ್ಯ ನಾಯಕತ್ವವೇ ಬದಲು’

‘ವಿರೋಧ ಪಕ್ಷದ ನಾಯಕ ಸ್ಥಾನ ಬದಲಾವಣೆ ಮಾಡಬೇಕೆಂದು ಕೇಂದ್ರದ ಕಾಂಗ್ರೆಸ್‌ ನಾಯಕರು ಯೋಚನೆ ಮಾಡುತ್ತಿದ್ದಾರೆಯೇ ಹೊರತು ಯಡಿಯೂರಪ್ಪ ಬದಲಾವಣೆ ಕುರಿತಂತೆ ಅಲ್ಲ’ ಎಂದು ಸಿದ್ದರಾಮಯ್ಯ ಅವರಿಗೆ ಯಡಿಯೂರಪ್ಪ ತಿರುಗೇಟು ನೀಡಿದರು.

‘ಯಡಿಯೂರಪ್ಪನನ್ನು ಬದಲಾಯಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಪದೇಪದೇ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಶಿರಾ ಮತ್ತು ಆರ್‌.ಆರ್‌. ನಗರ ಎರಡೂ ಕ್ಷೇತ್ರಗಳನ್ನು ಭಾರಿ ಮತಗಳ ಅಂತರದಿಂದ ಬಿಜೆಪಿ ಗೆಲ್ಲುವ ವಿಶ್ವಾಸ ನನಗಿದೆ. ತಮ್ಮ ನಾಯಕತ್ವದಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋಲಲಿದೆ ಎಂದು ಸಿದ್ದರಾಮಯ್ಯ ಅವರಿಗೆ ಹೇಳಬಯಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.