ಬೆಂಗಳೂರು: ಸೈಬರ್ ಮತ್ತು ಆರ್ಥಿಕ ಅಪರಾಧಗಳನ್ನು ಬೇಧಿಸಲು ಪೊಲೀಸರಿಗೆ ಹೆಚ್ಚಿನ ತರಬೇತಿ, ಆಧುನಿಕ ತಂತ್ರಜ್ಞಾನಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ರಾಜಭವನದ ಗಾಜಿನಮನೆಯಲ್ಲಿ ಗುರುವಾರ ಪೊಲೀಸ್ ಇಲಾಖೆ ಆಯೋಜಿಸಿದ್ದ ಪೊಲೀಸ್ ಪದಕ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಅತ್ಯಾಧುನಿಕ ತಂತ್ರಜ್ಞಾನದ ಬಲದಿಂದ ಪೊಲೀಸ್ ಪಡೆಗೆ ಹೆಚ್ಚಿನ ಶಕ್ತಿ ತುಂಬಲಾಗುವುದು ಎಂದು ಹೇಳಿದರು.
ಸೈಬರ್ ಅಪರಾಧಗಳ ಸಮರ್ಪಕ ತನಿಖೆಗಾಗಿ ಸುಸಜ್ಜಿತ ಅಪರಾಧಗಳ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರವನ್ನು ಬೆಂಗಳೂರಿನ ಸಿಐಡಿ ಮುಖ್ಯ ಕಚೇರಿಯಲ್ಲಿ ಸ್ಥಾಪಿಸಲಾಗಿದೆ. ಇವೆಲ್ಲ ಕಾರ್ಯಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ನೆರವು ಬೇಕಿದೆ. ಅದನ್ನು ಒದಗಿಸಲಾಗುವುದು ಎಂದರು.
ರಾಷ್ಟ್ರದಲ್ಲಿಯೇ ಅತ್ಯುತ್ತಮ ಪೊಲೀಸ್ ಪಡೆ ಎನ್ನುವ ಹೆಗ್ಗಳಿಕೆಯನ್ನು ಕರ್ನಾಟಕ ರಾಜ್ಯ ಪೊಲೀಸ್ ಪಡೆ ಪಡೆದಿದೆ. ಅತಿ ಸೂಕ್ಷ್ಮ ಪ್ರಕರಣಗಳನ್ನು ವಿಚಾರಣೆಗೆ ಗುರಿಪಡಿಸಿದ ನಮ್ಮ ಪೊಲೀಸ್ ಪಡೆಯ ಕ್ಷಮತೆ ಅದ್ವಿತೀಯವಾದುದು ಎಂದು ಶ್ಲಾಘಿಸಿದರು.
ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಅಪರಾಧಗಳನ್ನು ತಡೆಗಟ್ಟಲು ಹಾಗೂ ಅಪರಾಧಿಗಳನ್ನು ಪತ್ತೆ ಮಾಡಲು ಹಬ್ಬ–ಹರಿದಿನಗಳೆನ್ನದೇ ಸದಾಕಾಲ ದಕ್ಷತೆಯಿಂದ ದಣಿವಿಲ್ಲದೇ ಪೊಲೀಸರು ಶ್ರಮಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಪೊಲೀಸ್ ಪದಕ ಪ್ರದಾನ ಮಾಡಿದ ರಾಜ್ಯಪಾಲ ವಜುಬಾಯಿ ವಾಲಾ ಮಾತನಾಡಿ, ಸಜ್ಜನರಿಗೆ ರಕ್ಷಣೆ ನೀಡಿ, ದುರ್ಜನ ಮನಸ್ಥಿತಿಯನ್ನು ಶಿಕ್ಷಿಸಬೇಕು. ಬದುಕಿರುವಷ್ಟು ದಿನ ಶೌರ್ಯ, ಪೌರುಷ ಮತ್ತು ಗರ್ವದಿಂದ ಬದುಕಬೇಕುಎಂದು ಹೇಳಿದರು.
ರಾಜ್ಯದಲ್ಲಿ ಶಾಂತಿ ಕಾಪಾಡುವುದು ಪೊಲೀಸರ ಜವಾಬ್ದಾರಿಯಾಗಿದ್ದು, ಅವರು ತಮ್ಮ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿವರ್ಹಿಸುತ್ತಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿಯು ಪೊಲೀಸರನ್ನು ನೋಡಿದಾಗ ಸುರಕ್ಷಿತ ಭಾವನೆಯು ಜನರಲ್ಲಿ ಮೂಡಬೇಕು ಎಂದು ತಿಳಿಸಿದರು.
ಪದಕ ಪಡೆದ ಅಧಿಕಾರಿಗಳು ತಮ್ಮ ಸಹೋದ್ಯೋಗಿಗಳು ರಾಜ್ಯದ ಜನರ ಸುರಕ್ಷತೆಯನ್ನು ಕಾಪಾಡಲು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ವಜುಬಾಯಿ ವಾಲಾ ಸಲಹೆ ನೀಡಿದರು.
ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವ ದಿನಾಚರಣೆಯ (2018–2019 ನೇ ಸಾಲಿನ) ಸಂದರ್ಭದಲ್ಲಿ ವಿಶೇಷ ಸೇವೆ ಸಲ್ಲಿಸಿದ 4 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪದಕ ಮತ್ತು ಪ್ರಶಂಸನೀಯ ಸೇವೆ ಸಲ್ಲಿಸಿದ 74 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ಪದಕ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಡಾ.ರಜನೀಶ್ ಗೋಯೆಲ್, ಡಿಜಿಪಿ ಪ್ರವೀಣ್ ಸೂದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.