ADVERTISEMENT

ಸಚಿವ ಸ್ಥಾನದ ಕುರಿತಾಗಿ ಸಿಎಂ, ಡಿಸಿಎಂ ತೀರ್ಮಾನ: ಜಯಚಂದ್ರ

​ಪ್ರಜಾವಾಣಿ ವಾರ್ತೆ
Published 29 ಮೇ 2023, 15:47 IST
Last Updated 29 ಮೇ 2023, 15:47 IST
ಟಿ.ಬಿ. ಜಯಚಂದ್ರ,
ಟಿ.ಬಿ. ಜಯಚಂದ್ರ,   

ಬೆಂಗಳೂರು: ‘ಸಚಿವ ಸ್ಥಾನ ಸಿಗುವ ನಿರೀಕ್ಷೆ ನಮ್ಮ ಸಮುದಾಯ ಮತ್ತು  ಕ್ಷೇತ್ರದ ಜನರಲ್ಲಿತ್ತು. ಎಲ್ಲ ವಿಚಾರಗಳನ್ನು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯ ಗಮನಕ್ಕೆ ನಾನು ತಂದಿದ್ದೇನೆ. ಅವರು ಯಾವ ರೀತಿ ತೀರ್ಮಾನ ಮಾಡುತ್ತಾರೋ ನೋಡೋಣ’ ಎಂದು ಸಚಿವ ಸ್ಥಾನ ಆಕಾಂಕ್ಷಿ ಹಿರಿಯ ಶಾಸಕ ಟಿ.ಬಿ ಜಯಚಂದ್ರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾನು ಸಚಿವನಾದರೆ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳು ಜಾರಿಯಾಗುತ್ತವೆ ಎಂದು ಜನ ಆಸೆಪಟ್ಟಿದ್ದರು.‌ ಜನರನ್ನು ಸಮಾಧಾನಪಡಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಮುಂದೆ ಅನಾಹುತಗಳು ಆಗಬಹುದು. ಪಕ್ಷದ‌ ಮೇಲೆ ದುಷ್ಪರಿಣಾಮ ಆಗಬಹುದು. ಎಚ್ಚರಿಕೆ ತೆಗೆದುಕೊಳ್ಳಬೇಕೆಂದು ಹೇಳಿದ್ದೇನೆ. ಯೋಚನೆ ಮಾಡುತ್ತೇವೆಂದು ಇಬ್ಬರೂ ಹೇಳಿದ್ದಾರೆ’ ಎಂದರು.

‘ಬಿಡಿಎ ಅಧ್ಯಕ್ಷ, ದೆಹಲಿ ವಿಶೇಷ ಪ್ರತಿನಿಧಿ ಸ್ಥಾನ ಒಪ್ಪಿಕೊಳ್ಳುತ್ತೀರಾ’ ಎಂಬ ಪ್ರಶ್ನೆಗೆ, ‘ಅವರು ಏನು ಚರ್ಚೆ ಮಾಡಿದ್ದಾರೋ ಗೊತ್ತಿಲ್ಲ.‌ ನಾನು ನಿರ್ದಿಷ್ಟವಾಗಿ ಏನನ್ನೂ ಕೇಳಿಲ್ಲ’ ಎಂದರು.

ADVERTISEMENT

‘ಗ್ಯಾರಂಟಿ’ಗಳ ಜಾರಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಸಚಿವ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಆಗಬೇಕು. ಸಂಪನ್ಮೂಲಗಳ ಕ್ರೋಡೀಕರಣ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಅಲ್ಲಿಯವರೆಗೆ ಸಚಿವರುಗಳು ಈ ಬಗ್ಗೆ ವಿಶ್ಲೇಷಿಸುವುದು ಸರಿಯಲ್ಲ.‌ ಹಾರಿಕೆ ಉತ್ತರ ಕೊಟ್ಟರೆ ಜನರ ಮನಸ್ಸಿನಲ್ಲಿ ಗೊಂದಲಗಳು ಮೂಡುತ್ತದೆ. ಹೀಗಾಗಿ, ಯಾವ ಸಚಿವರೂ ಮಾತನಾಡಬಾರದು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.