ಬೆಂಗಳೂರು: ‘ಸಿದ್ದರಾಮಯ್ಯ ಅವರು ಹಿರಿಯರು, ಲೋಕಾನುಭವ ಹೊಂದಿರುವವರು. ಆದರೆ, ಅವರಿಗೆ ಅಮಾವಾಸ್ಯೆ ಮತ್ತು ಹುಣ್ಣಿಮೆ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಅಮಾವಾಸ್ಯೆ ದಿನವೂ ಸೂರ್ಯ ಇರುತ್ತಾನೆ. ಹುಣ್ಣಿಮೆ ದಿನವೂ ಸೂರ್ಯ ಇರುತ್ತಾನೆ. ವರ್ಷದ 365 ದಿನವೂ ಪ್ರಕಾಶಮಾನವಾಗಿರುವುದು ಸೂರ್ಯನೇ’ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
‘ತೇಜಸ್ವಿ ಸೂರ್ಯ ಅಲ್ಲ, ಅಮಾವಾಸ್ಯೆ ಸೂರ್ಯ’ ಎಂಬ ಸಿದ್ದರಾಮಯ್ಯ ಅವರ ಟೀಕೆಗೆ ಪ್ರತಿಕ್ರಿಯಿಸಿದ ತೇಜಸ್ವಿ, ‘ಅಮಾವಾಸ್ಯೆ ದಿನ ಇಲ್ಲದಿರುವವನು ಚಂದ್ರ. ಚಂದ್ರನನ್ನು ನೋಡಿ ಪ್ರಾರ್ಥನೆ ಮಾಡುವ ಜನರೊಂದಿಗೆ ಅವರು ಇದ್ದಾರೆ. ಹೀಗಾಗಿ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಂದು ಸೂರ್ಯ ಇರುವುದಿಲ್ಲ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ನಮಗೆ ಅಮಾವಾಸ್ಯೆ ಮತ್ತು ಹುಣ್ಣಿಮೆ ಎರಡೂ ದಿನವೂ ಮಹತ್ವದ್ದು. ಆ ಎರಡೂ ದಿನಗಳಂದು ಲಕ್ಷ್ಮೀ ಪೂಜೆ ಮಾಡುತ್ತೇವೆ’ ಎಂದರು.
‘ಸಿದ್ದರಾಮಯ್ಯ ಹಲವು ಬಾರಿ ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದಾರೆ. ಹಿಂದೆ ಚುನಾವಣೆ ವೇಳೆಯೂ ಟೀಕಿಸಿದ್ದರು. ಅವರು ಹಿರಿಯರು, ಅವರ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದಿಲ್ಲ. ಸಂಸದನಾಗಿ ಅದು ನನಗೆ ಶೋಭೆ ತರುವುದಿಲ್ಲ. ನನ್ನ ತಂದೆ ವಯಸ್ಸಿನ ಅವರ ಬಗ್ಗೆ ಮಾತನಾಡುವ ಸಂಸ್ಕಾರವೂ ನನ್ನದಲ್ಲ’ ಎಂದು ತೇಜಸ್ವಿ ಹೇಳಿದರು.
‘ರಾಜ್ಯಕ್ಕೆ ಹಿಡಿದಿರುವ ದೊಡ್ಡ ಗ್ರಹಣವೆಂದರೆ ಕಾಂಗ್ರೆಸ್ ಆಡಳಿತ. ಎರಡೂವರೆ ವರ್ಷದ ನಂತರ ರಾಜ್ಯಕ್ಕೆ ಹಿಡಿದ ಗ್ರಹಣ ಮುಕ್ತಿಯಾಗುತ್ತದೆ. ಆ ಬಳಿಕ ಕರ್ನಾಟಕ ಸೂರ್ಯ–ಚಂದ್ರ ಇರುವವರೆಗೂ ಪ್ರಕಾಶಮಾನವಾಗಿ ಬೆಳಗುತ್ತದೆ’ ಎಂದರು.
‘ಕರ್ನಾಟಕಕ್ಕೆ ಹಿಡಿದಿರುವ ಗ್ರಹಣ ನಿಮ್ಮ ಆಡಳಿತ. ನೀವು ಅಧಿಕಾರಕ್ಕೆ ಬಂದು ಸುಮಾರು ಎರಡೂವರೆ ವರ್ಷವಾಗಿದೆ. ಬೆಂಗಳೂರು ರಸ್ತೆ ಗುಂಡಿಗಳಿಂದ ಜನರು ನರಕ ಯಾತನೆ ಅನುಭವಿಸುತ್ತಿದ್ದಾರೆ. ನಿಮ್ಮ ಆಡಳಿತ ಎಷ್ಟು ಚೆನ್ನಾಗಿದೆ ಎಂಬುದಕ್ಕೆ ಬೆಂಗಳೂರಿನ ರಸ್ತೆ ಗುಂಡಿಗಳೇ ಸಾಕ್ಷಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.