ADVERTISEMENT

‘ಕೃಷಿ ಸಮ್ಮಾನ್’ ಚುನಾವಣಾ ಗಿಮಿಕ್’

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 20:22 IST
Last Updated 23 ಫೆಬ್ರುವರಿ 2019, 20:22 IST
ರಾಜ್ಯಮಟ್ಟದ ಕ್ರೀಡಾಕೂಟ ಉದ್ಘಾಟನೆ – ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ರಾಜ್ಯಮಟ್ಟದ ಕ್ರೀಡಾಕೂಟ ಉದ್ಘಾಟನೆ – ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ   

ಚನ್ನಪಟ್ಟಣ (ರಾಮನಗರ): ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗೆ ಹೋಗಲು ಭಯಭೀತರಾಗಿ ‘ಕೃಷಿ ಸಮ್ಮಾನ್’ ಯೋಜನೆಯನ್ನು ಘೋಷಿಸಿದ್ದಾರೆ. ಇದೊಂದು ಚುನಾವಣಾ ಗಿಮಿಕ್ ಆಗಿದ್ದು, ಮುಂದೆ ಅಧಿಕಾರಕ್ಕೆ ಬರುವ ಸರ್ಕಾರ ಅದನ್ನು ಮುಂದುವರಿಸುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಈ ಯೋಜನೆಯ ಅಡಿ ಕೇಂದ್ರವು ರಾಜ್ಯದ 46 ಲಕ್ಷ ರೈತರಿಗೆ ಕೇವಲ ₹2,098 ಕೋಟಿ ನೀಡಲಿದೆ. 17 ಬಿಜೆಪಿ ಸಂಸದರನ್ನು ಆರಿಸಿಕೊಟ್ಟ ರಾಜ್ಯಕ್ಕೆ ಇಷ್ಟೇ ಕೊಡುಗೆಯೇ?’ ಎಂದು ಅವರು ಪ್ರಶ್ನಿಸಿದರು.

‘ರಾಜ್ಯ ಸರ್ಕಾರವು ಪ್ರತಿ ವರ್ಷ ಹಾಲು ಉತ್ಪಾದಕರಿಗೆ ನೀಡುವ ಸಬ್ಸಿಡಿಗಾಗಿಯೇ ₹2,500 ಕೋಟಿ ವ್ಯಯಿಸುತ್ತಿದೆ. ರೈತರಿಗೆ ಉಚಿತವಾಗಿ ಪೂರೈಸುವ ವಿದ್ಯುತ್‌ಗಾಗಿ ಕಳೆದ ವರ್ಷ ₹9 ಸಾವಿರ ಕೋಟಿ ನೀಡಿದ್ದು, ಈ ವರ್ಷ ಬಜೆಟ್‌ನಲ್ಲಿ ಅದಕ್ಕಾಗಿ ₹11 ಸಾವಿರ ಕೋಟಿ ಮೀಸಲಿಡಲಾಗಿದೆ. ರಾಜ್ಯಕ್ಕೆ ಹೋಲಿಸಿದರೆ ಕೇಂದ್ರವು ರೈತರಿಗೆ ಘೋಷಿಸಿರುವ ಕೊಡುಗೆ ಏನೇನು ಅಲ್ಲ’ ಎಂದು ಅವರು ಲೇವಡಿ ಮಾಡಿದರು.

ADVERTISEMENT

ನರೇಗಾ ಬಿಲ್‌ ಬಾಕಿ: ‘ಬಿಜೆಪಿಯವರು ಮಾತೆತ್ತಿದರೆ ಕೇಂದ್ರದ ಅನುದಾನದ ಲೆಕ್ಕ ಕೊಡಿ ಎನ್ನುತ್ತಾರೆ. ನರೇಗಾ ಯೋಜನೆಯ ಅಡಿ ರಾಜ್ಯಕ್ಕೆ ₹2100 ಕೋಟಿ ಬಾಕಿ ಬರಬೇಕಿದೆ. 2016–18ರಲ್ಲಿ ₹938 ಕೋಟಿ ಅನುದಾನ ಬರಬೇಕಿದ್ದು, ಈ ಹಣವನ್ನು ರಾಜ್ಯ ಸರ್ಕಾರವೇ ಪಾವತಿಸಿ ಕಾಮಗಾರಿಗಳನ್ನು ಮುಂದುವರಿಸಿದೆ. ನರೇಗಾ ಯೋಜನೆಯ ಹೊರೆಯನ್ನೂ ನಾವೇ ಹೊರುತ್ತಿದ್ದೇವೆ’ ಎಂದರು.

‘ಕೆಲವರಿಗೆ ಸರ್ಕಾರವನ್ನು ಅಸ್ಥಿರಗೊಳಿಸುವುದೇ ಕೆಲಸವಾಗಿದೆ. ಆಗಸ್ಟ್ ನಂತರ ಸರ್ಕಾರ ಬೀಳಲಿದೆ ಎಂಬುದೆಲ್ಲ ಸುಳ್ಳು. ಐದು ವರ್ಷ ಆಡಳಿತ ಪೂರ್ಣಗೊಳಿಸುತ್ತೇವೆ’ ಎಂದರು.

‘ಇದೇ 27 ರಂದು ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ₹6 ಸಾವಿರ ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ ನೀಡಲಾಗುವುದು. ಹಾಗೆಂದು ನಮ್ಮ ಸರ್ಕಾರ ಮಂಡ್ಯ, ರಾಮನಗರ, ಹಾಸನ ಅಭಿವೃದ್ಧಿಗೆ ಸೀಮಿತ ಅಲ್ಲ. ರಾಜ್ಯದ ಉಳಿದ ಜಿಲ್ಲೆಗಳಿಗೂ ಇದೇ ಆದ್ಯತೆ ನೀಡುತ್ತೇನೆ’ ಎಂದು ಸಮರ್ಥಿಸಿಕೊಂಡರು.

**

ನಾವು ರೆಡಿಮೆಡ್‌ ಗಂಡು: ಡಿಕೆಶಿ

ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ ‘ರಾಜ್ಯದಲ್ಲಿ ರೆಡಿಮೆಡ್‌ ಗಂಡು ನಾವಿರುವಾಗ ಇನ್ನೊಂದು ಗಂಡು ಹುಡುಕುವ ಅಗತ್ಯ ಇಲ್ಲ’ ಎಂದು ಬಿಜೆಪಿಯವರನ್ನು ಟೀಕಿಸಿದರು.

‘ಆಪರೇಷನ್‌ ಕಮಲ ಮುಗಿದ ಅಧ್ಯಾಯ. ಈ ಆಪರೇಷನ್‌ ಬಂದ್‌ ಮಾಡುವಂತೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಈಗಾಗಲೇ ಬಿ.ಎಸ್. ಯಡಿಯೂರಪ್ಪರಿಗೆ ಬುದ್ಧಿವಾದ ಹೇಳಿದ್ದಾರೆ’ ಎಂದರು.

**

ರಾಜ್ಯಕ್ಕೆ ಹೋಲಿಸಿದರೆ ಕೇಂದ್ರವು ರೈತರಿಗೆ ಘೋಷಿಸಿರುವ ಕೊಡುಗೆ ಏನೇನೂ ಅಲ್ಲ.

-ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.