ADVERTISEMENT

ಜಲಾನಯನ ಕಾಮಗಾರಿಗಳ ಮೌಲ್ಯಮಾಪನ: ಸಿಎಂ ಸೂಚನೆ

‘ವಿಶ್ವ ಬ್ಯಾಂಕ್‌ ನೆರವಿನ ರಿವಾರ್ಡ್‌ ಯೋಜನೆ’ ಮತ್ತು ಜಲಾನಯನ ಉತ್ಕೃಷ್ಟತಾ ಕೇಂದ್ರದ ಉದ್ಘಾಟನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 8 ಮೇ 2022, 16:20 IST
Last Updated 8 ಮೇ 2022, 16:20 IST
ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಗಿರಿರಾಜ್‌ ಸಿಂಗ್‌ ಅವರು ವಿಶ್ವ ಬ್ಯಾಂಕ್‌ ನೆರವಿನ ರಿವಾರ್ಡ್‌ ಯೋಜನೆಗೆ ಚಾಲನೆ ನೀಡಿದರು. ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಅಶೋಕ್‌ ದಳವಾಯಿ, ಕೃಷಿ ಸಚಿವ ಬಿ.ಸಿ. ಪಾಟೀಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು– ಪ್ರಜಾವಾಣಿ ಚಿತ್ರ
ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಗಿರಿರಾಜ್‌ ಸಿಂಗ್‌ ಅವರು ವಿಶ್ವ ಬ್ಯಾಂಕ್‌ ನೆರವಿನ ರಿವಾರ್ಡ್‌ ಯೋಜನೆಗೆ ಚಾಲನೆ ನೀಡಿದರು. ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಅಶೋಕ್‌ ದಳವಾಯಿ, ಕೃಷಿ ಸಚಿವ ಬಿ.ಸಿ. ಪಾಟೀಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಜಲಾನಯನ ಯೋಜನೆ ಅಡಿಯಲ್ಲಿ ಈವರೆಗೆ ಕೈಗೊಂಡಿರುವ ಕಾಮಗಾರಿಗಳ ಪರಿಣಾಮಗಳ ಕುರಿತು ಮೌಲ್ಯಮಾಪನ ನಡೆಸಬೇಕು ಎಂದು ಜಲಾನಯನ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಡಾ. ಬಾಬು ರಾಜೇಂದ್ರ ಪ್ರಸಾದ್‌ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ಭಾನುವಾರ ನಡೆದ ‘ವಿಶ್ವ ಬ್ಯಾಂಕ್‌ ನೆರವಿನ ರಿವಾರ್ಡ್‌ ಯೋಜನೆ’ ಮತ್ತು ಜಲಾನಯನ ಉತ್ಕೃಷ್ಟತಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.

‘ಸುಜಲಾ ಒಂದು, ಎರಡು ಮತ್ತು ಮೂರನೇ ಹಂತದ ಯೋಜನೆಗಳಲ್ಲಿ ನೂರಾರು ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಒಂದೂವರೆ ದಶಕದಿಂದ ಈ ಯೋಜನೆ ಜಾರಿಯಲ್ಲಿದೆ. ಇದರಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಯಾವ ಅನುಕೂಲಗಳಾಗಿವೆ ಎಂಬುದನ್ನು ತಿಳಿಯಬೇಕು. ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಯೋಜನೆಯಿಂದ ಎಷ್ಟು ಸಹಾಯವಾಗಿದೆ ಎಂಬುದನ್ನೂ ಪತ್ತೆ ಮಾಡಬೇಕು. ಹಿಂದಿನ ಕಾಮಗಾರಿಗಳ ಅನುಷ್ಠಾನದಲ್ಲಿನ ಒಳ್ಳೆಯ ಅಂಶಗಳು ಹಾಗೂ ಲೋಪಗಳನ್ನು ಅರಿಯಬೇಕು. ಅದರ ಆಧಾರದಲ್ಲೇ ಹೊಸ ಯೋಜನೆ ಅನುಷ್ಠಾನಕ್ಕೆ ಮಾರ್ಗಸೂಚಿ ರೂಪಿಸಬೇಕು’ ಎಂದು ಹೇಳಿದರು.

ADVERTISEMENT

ಜಮೀನಿನಲ್ಲಿ ಸಂಶೋಧನೆ ನಡೆಯಲಿ: ಕೃಷಿ ವಿಶ್ವವಿದ್ಯಾಲಯಗಳು ತಮ್ಮ ಸಂಶೋಧನಾ ಕ್ಷೇತ್ರವನ್ನು ವಿಶ್ವವಿದ್ಯಾಲಯಗಳ ಆವರಣದಿಂದ ರೈತರ ಕೃಷಿ ಜಮೀನುಗಳಿಗೆ ಸ್ಥಳಾಂತರಿಸಬೇಕು. ಪ್ರಾಯೋಜಕರನ್ನು ಕೇಂದ್ರೀಕರಿಸಿದ ಸಂಶೋಧನೆಗಳಿಗಿಂತ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಕೃಷಿ ಕ್ಷೇತ್ರದ ತಜ್ಞರ ದೃಷ್ಟಿಕೋನದಲ್ಲಿ ಸಮಗ್ರ ಬದಲಾವಣೆ ಆಗಬೇಕು ಎಂದು ಮುಖ್ಯಮಂತ್ರಿ ಸಲಹೆ ಮಾಡಿದರು.

ನಕಲಿ ಬೀಜಗಳ ಹಾವಳಿ ರೈತರಿಗೆ ದೊಡ್ಡ ಸವಾಲಾಗಿದೆ. ಈ ಸಮಸ್ಯೆ ನಿವಾರಿಸಲು ಬೀಜೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕಿದೆ. ಖಾಸಗಿ ಕಂಪನಿಗಳು ಮಾರುಕಟ್ಟೆಗೆ ಪೂರೈಸುವ ಬೀಜಗಳ ಪೂರ್ವಾಪರ ಮಾಹಿತಿಯನ್ನು ತಿಳಿಯಲು ‘ಸೀಡ್‌ ಟ್ರ್ಯಾಕಿಂಗ್‌’ ವ್ಯವಸ್ಥೆಯನ್ನು ಜಾರಿಗೊಳಿಸಬೇಕಿದೆ ಎಂದರು.

ಹಿಡುವಳಿ ಕಾರ್ಡ್‌: ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ವಿಶ್ವ ಬ್ಯಾಂಕ್‌ ನೆರವಿನ ರಿವಾರ್ಡ್‌ ಯೋಜನೆಯ ಅಡಿಯಲ್ಲಿ ರೈತರಿಗೆ ಹಿಡುವಳಿ ಕಾರ್ಡ್‌ ವಿತರಿಸಲಾಗುವುದು. ಪ್ರತಿ ರೈತರ ಹಿಡುವಳಿ ಜಮೀನಿನ ವಿವರ, ಅದರಲ್ಲಿನ ಬೆಳೆಗಳು, ಜಮೀನಿನಲ್ಲಿರುವ ಸಮಸ್ಯೆಗಳ ಮಾಹಿತಿಗಳನ್ನು ಅದರಲ್ಲಿ ನಮೂದಿಸಲಾಗುವುದು. ಎಲ್ಲ ರೈತರೂ ಈ ಯೋಜನೆಯ ಲಾಭ ಪಡೆಯಬೇಕು’ ಎಂದರು.

ಕೃಷಿ ಸಚಿವ ಬಿ.ಸಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಡಿಶಾ ಕೃಷಿ ಸಚಿವ ಅರುಣ್‌ ಕುಮಾರ್‌ ಸಾಹೂ ಅಲ್ಲಿನ ಜಲಾನಯನ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು. ಸಚಿವರಾದ ಮುನಿರತ್ನ, ಎಸ್‌.ಟಿ. ಸೋಮಶೇಖರ್‌, ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ರಮೇಶ್‌ ಗೌಡ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅಶೋಕ್‌ ದಳವಾಯಿ, ವಿಶ್ವ ಬ್ಯಾಂಕ್‌ನ ಕೃಷಿ ತಜ್ಞ ಆಂಡ್ರೀವ್‌ ದಿ ಗುಡ್‌ ಲ್ಯಾಂಡ್‌, ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಸಿ. ಕಳಸದ, ಆಯುಕ್ತ ಡಾ.ಎಂ.ವಿ. ವೆಂಕಟೇಶ್‌, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌. ರಾಜೇಂದ್ರ ಪ್ರಸಾದ್‌ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್ ಉಪಸ್ಥಿತರಿದ್ದರು.

‘ಫಲವತ್ತತೆ ಹೆಚ್ಚಿಸಲು ಉನ್ನತ ಕೇಂದ್ರ’

‘ಬಂಜರು ಜಮೀನುಗಳಲ್ಲಿ ಫಲವತ್ತತೆ ಹೆಚ್ಚಿಸುವುದಕ್ಕಾಗಿಯೇ ವಿಶ್ವ ಬ್ಯಾಂಕ್‌ ಸಹಭಾಗಿತ್ವದಲ್ಲಿ ಉನ್ನತ ಮಟ್ಟದ ಕೇಂದ್ರ (ಸೆಂಟರ್‌ ಫಾರ್‌ ಎಕ್ಸಲೆನ್ಸ್‌) ಸ್ಥಾಪಿಸಬೇಕಿದೆ’ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಗಿರಿರಾಜ್‌ ಸಿಂಗ್‌ ಸಲಹೆ ನೀಡಿದರು.

‘ಕರ್ನಾಟಕದಲ್ಲಿ ಈಗಾಗಲೇ ಜಲಾನಯನ ಯೋಜನೆ ಅಡಿಯಲ್ಲಿ ಸಾವಿರಾರು ಎಕರೆ ಬಂಜರು ಜಮೀನಿನಲ್ಲಿ ಫಲವತ್ತತೆ ಹೆಚ್ಚಿಸಲಾಗಿದೆ. ಉನ್ನತ ಮಟ್ಟದ ಕೇಂದ್ರದ ಮೂಲಕ ಹೆಚ್ಚು ಕೆಲಸ ಮಾಡಬೇಕು. ಬಂಜರು ಜಮೀನಿನಲ್ಲಿ ಫಲವತ್ತತೆ ಹೆಚ್ಚಿಸಿ, ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕು’ ಎಂದರು.

ಸಾಧಕರಿಗೆ ಸನ್ಮಾನ

ಅತ್ಯುತ್ತಮ ರೈತ ಉತ್ಪಾದಕ ಸಂಸ್ಥೆಗಳಿಗೆ ಇದೇ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರೈತ ಉತ್ಪಾದಕ ಸಂಸ್ಥೆಗಳ ಏಕರೂಪ ಬ್ರಾಂಡಿಂಗ್‌ ಸ್ಪರ್ಧೆಗೂ ಚಾಲನೆ ನೀಡಲಾಯಿತು.

ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿ ರೈತರ ಜಮೀನಿಗೆ ತೆರಳಿ ಸೇವೆ ಒದಗಿಸುವುದಕ್ಕಾಗಿ ಸಿದ್ಧಪಡಿಸಿರುವ 100 ಸಂಚಾರಿ ಕೃಷಿ ಪ್ರಯೋಗಾಲಯಗಳಿಗೂ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರು ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.