ಡಿಕೆಶಿ
ಬೆಂಗಳೂರು: ‘ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿಯ ದ್ವಂದ್ವ ನಿಲುವಿನ ವಿರುದ್ಧ ಇದೇ 17ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ’ ಎಂದರು.
‘ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲೂ ಶೀಘ್ರ ಹೋರಾಟ ಆಯೋಜಿಸಲಾಗುವುದು. ಬಿಜೆಪಿಯವರ ಜನಾಕ್ರೋಶ ಯಾತ್ರೆಯ ವಿರುದ್ಧ ನಾವೂ ಏನಾದರೂ ಮಾಡಬೇಕಲ್ಲವೇ’ ಎಂದರು.
‘ಬಿಜೆಪಿಯವರು ಯಾತ್ರೆ ಹೊರಟ ದಿನವೇ ಕೇಂದ್ರ ಸರ್ಕಾರ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ₹50, ಪೆಟ್ರೋಲ್, ಡೀಸೆಲ್‌ಗೆ ತಲಾ ₹2 ಹೆಚ್ಚಿಸಿದೆ. ತಮ್ಮ ಯಾತ್ರೆ ಕೇಂದ್ರ ಸರ್ಕಾರದ ವಿರುದ್ಧದ ಜನಾಕ್ರೋಶ ಎಂದು ಬಿಜೆಪಿಯವರು ಫಲಕ ಹಾಕಿಕೊಳ್ಳಬೇಕು’ ಎಂದರು.
‘ನಮ್ಮ ಸರ್ಕಾರ ರೈತರನ್ನು ಉಳಿಸಲು ಹಾಲಿನ ದರ ಏರಿಕೆ ಮಾಡಿದೆ’ ಎಂದು ಸಮರ್ಥಿಸಿದ ಅವರು ‘ನೀರಿಗೆ ಅತ್ಯಂತ ಕನಿಷ್ಠ ದರ ಹೆಚ್ಚಿಸಿದ್ದೇವೆ. ಕಸ ಸಂಗ್ರಹಣೆ ಶುಲ್ಕವನ್ನು ಹಿಂದೆ ಬಿಜೆಪಿ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಕಡಿಮೆ ನಿಗದಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದ ಕಾರಣ ನಮ್ಮಲ್ಲಿಯೂ ಬೆಲೆ ಏರಿಕೆಯಾಗಿದೆ. ಅವರ ನೀತಿಯ ಕಾರಣಕ್ಕೆ ನಾವು ಬೆಲೆ ಏರಿಕೆ ಮಾಡದೆ ವಿಧಿಯಿಲ್ಲ. ಎಲ್ಲ ಬೆಲೆ ಏರಿಕೆಗೂ ಜಿಎಸ್‌ಟಿಯೇ ಮೂಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.