ಸಾಂದರ್ಭಿಕ ಚಿತ್ರ
ಬೆಂಗಳೂರು: ವಿವಿಧ ಕೈಗಾರಿಕಾ ವಲಯಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ ಸಲ್ಲಿಸಿದ್ದ ₹9,823 ಕೋಟಿ ಮೊತ್ತದ ಒಂಬತ್ತು ಪ್ರಸ್ತಾವಗಳಿಗೆ ಮುಖ್ಯಮಂತ್ರಿ ಅಧ್ಯಕ್ಷತೆಯ ‘ರಾಜ್ಯ ಉನ್ನತ ಮಟ್ಟದ 64ನೇ ಒಪ್ಪಿಗೆ ನೀಡಿಕೆ ಸಭೆ’ ಸೋಮವಾರ ಸಮ್ಮತಿ ನೀಡಿತು.
ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪ್ರಸ್ತಾವಗಳಲ್ಲಿ ಮೂರು ಹೊಸ ವಲಯಗಳು, ವಿಸ್ತರಣಾ ಬಂಡವಾಳ ಹೂಡಿಕೆ ಹಾಗೂ ಆರು ಹೆಚ್ಚುವರಿ ಬಂಡವಾಳ ಹೂಡಿಕೆ ಸೇರಿವೆ. ಕೋಚನಹಳ್ಳಿಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯದಲ್ಲಿ ₹3,425 ಕೋಟಿ ವೆಚ್ಚದ ಪ್ರಥಮ ಸೆಮಿಕಂಡಕ್ಟರ್ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ನೀಡಲಾಗಿದೆ’ ಎಂದರು.
ಹೊಸ ಕೈಗಾರಿಕಾ ವಲಯಗಳ ಅನುಷ್ಠಾನದಿಂದ 5,605 ಜನರಿಗೆ ಉದ್ಯೋಗ ದೊರೆಯಲಿದೆ. ಡಿ.ಎನ್. ಸಲ್ಯೂಷನ್ಸ್ ಇಂಡಿಯಾ ಸಂಸ್ಥೆಯ ₹998 ಕೋಟಿ ಬಂಡವಾಳ ಹೂಡಿಕೆಯಿಂದ 467 ಉದ್ಯೋಗ, ಸೈಲೆಕ್ಟ್ರಿಕ್ ಸೆಮಿಕಂಡಕ್ಟರ್ ಉತ್ಪಾದನಾ ಸಂಸ್ಥೆಯ ₹3,425.60 ಕೋಟಿ ಹೂಡಿಕೆಯಿಂದ 460 ಉದ್ಯೋಗ ಹಾಗೂ ಸನ್ಸೆರಾ ಎಂಜಿನಿಯರಿಂಗ್ ಲಿಮಿಟೆಡ್ ಸಂಸ್ಥೆಯ ₹2,150 ಕೋಟಿ ಹೂಡಿಕೆಯಿಂದ 3,500 ಉದ್ಯೋಗ ಸೃಷ್ಟಿಯಾಗಲಿವೆ ಎಂದರು.
ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನಗಳ ಉತ್ಪಾದನೆಯಲ್ಲಿ ರೈತರಿಗೂ ಲಾಭಾಂಶ ನೀಡುವ ಕುರಿತು ಪರಿಶೀಲನೆ ನಡೆಸಬೇಕು. ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಅನುಸರಿಸುತ್ತಿರುವ ನಿಯಮಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ. ಜಮೀನು ಪಡೆಯುವ ಕಂಪನಿಗಳು ನಿಗದಿತ ಅವಧಿಯಲ್ಲಿ ಕೈಗಾರಿಕೆಯನ್ನು ಆರಂಭಿಸದಿದ್ದರೆ ದಂಡ ವಿಧಿಸುವುದೂ ಸೇರಿದಂತೆ ಕ್ರಮ ಕೈಗೊಳ್ಳುವ ಕುರಿತು ಎಚ್ಚರಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಚಿವರಾದ ಎಂ.ಬಿ. ಪಾಟೀಲ, ಎನ್. ಚೆಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.