ADVERTISEMENT

ಥಲಸ್ಸೇಮಿಯಾ ಕಾಯಿಲೆ: ಬಾಲಕನ ಚಿಕಿತ್ಸೆಗೆ ಸಿ.ಎಂ ಪರಿಹಾರ ನಿಧಿಯಿಂದ ₹4.91 ಲಕ್ಷ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 15:57 IST
Last Updated 6 ಜನವರಿ 2026, 15:57 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ಥಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿರುವ ಕಲಬುರಗಿಯ ಐದು ವರ್ಷದ ಬಾಲಕ ಮಂಜುನಾಥನ ಚಿಕಿತ್ಸೆಗೆ ಮುಖ್ಯಮಂತ್ರಿ ಅವರ ಪರಿಹಾರ ನಿಧಿಯಿಂದ ₹4.91 ಲಕ್ಷ ನೆರವು ಮಂಜೂರು ಮಾಡಲಾಗಿದೆ.

ಕಲಬುರಗಿಯ ವಿಜಯಕುಮಾರ್ ಪರಮೇಶ್ವರ ಅವರು 2025ರ ಡಿಸೆಂಬರ್ 1ರಂದು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದರು. ‘ನಮ್ಮ ಮಗನ ಚಿಕಿತ್ಸೆಗೆ ₹30 ಲಕ್ಷ ವೆಚ್ಚವಾಗುತ್ತದೆ ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ. ನಾನೂ ಅಂಗವಿಕಲನಾಗಿದ್ದು, ಚಿಕಿತ್ಸೆ ವೆಚ್ಚ ಭರಿಸಲಾಗುತ್ತಿಲ್ಲ. ನೆರವು ಒದಗಿಸಿ’ ಎಂದು ಕೋರಿದ್ದರು.

ADVERTISEMENT

ಅವರ ಮನವಿಯನ್ನು ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ₹5 ಲಕ್ಷ ಪರಿಹಾರ ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರಂತೆ ಮುಖ್ಯಮಂತ್ರಿ ಅವರ ಪರಿಹಾರ ನಿಧಿಯ ಲೆಕ್ಕಾಧಿಕಾರಿಯು, ಬಾಲಕನಿಗೆ ಚಿಕಿತ್ಸೆ ನೀಡಿರುವ ನಗರದ ಎಚ್‌ಸಿಜಿ ಆಸ್ಪತ್ರೆಗೆ ಪತ್ರ ಬರೆದಿದ್ದಾರೆ.

‘ಬಾಲಕನ ಚಿಕಿತ್ಸೆಗೆ ಆಗುವ ವೆಚ್ಚದ ಸಂಪೂರ್ಣ ವಿವರ ಒದಗಿಸಿ. ನಮ್ಮ ಕಚೇರಿಗೆ ಮನವಿ ಸಲ್ಲಿಸಿದ ನಂತರದ (2025ರ ಡಿಸೆಂಬರ್‌ 2) ಬಿಲ್ಲುಗಳಿಗೆ ಮಾತ್ರವೇ ಆರ್ಥಿಕ ನೆರವು ಒದಗಿಸಲಾಗುವುದು. ಚಿಕಿತ್ಸಾ ವೆಚ್ಚದ ಶೇ 50ರಷ್ಟು ಅಥವಾ ₹4,91,750 ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಪರಿಗಣಿಸಲಾಗುತ್ತದೆ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.