ADVERTISEMENT

ಸಾಲ ಮಾಡಿ ತುಪ್ಪ ತಿಂದಿಲ್ಲ, ಮೋಜಿಗಾಗಿ ಸಾಲದ ಹಣ ಬಳಸೊಲ್ಲ: ಯಡಿಯೂರಪ್ಪ

ಕೋವಿಡ್‌ ಮತ್ತು ಪ್ರವಾಹದಿಂದ ಆರ್ಥಿಕ ಸಂಕಷ್ಟ * ಕಳೆದ ತ್ರೈಮಾಸಿಕದಲ್ಲಿ ಆರ್ಥಿಕ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 9:50 IST
Last Updated 24 ಮಾರ್ಚ್ 2021, 9:50 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ‘ನಾವೇನು ಸಾಲ ಮಾಡಿ ತುಪ್ಪ ತಿಂದಿಲ್ಲ ಅಥವಾ ಮೋಜಿಗಾಗಿ, ಔತಣ ನಡೆಸಲು ಸಾಲದ ಹಣ ಬಳಸಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರೋಧಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಗೆ ಬುಧವಾರ ಉತ್ತರ ನೀಡಿದ ಅವರು, ಈವರೆಗೆ ಯಾವುದೇ ಸರ್ಕಾರಗಳು ಯೋಜನೆಗಳ ಅನುಷ್ಠಾನ ಮಾಡಿದ ಉದಾಹರಣೆಗಳಿಲ್ಲ ಎಂದು ಹೇಳಿದರು.

ಸಮೃದ್ಧಿಯ ಸಂದರ್ಭಗಳಲ್ಲೇ ಸರ್ಕಾರಗಳು ಸಾಲ ಮಾಡಿರುವಾಗ ಕೋವಿಡ್‌ ಸಾಂಕ್ರಾಮಿಕ ಸಂಕಷ್ಟ, ಇತಿಹಾಸ ಕಂಡರಿಯದ ಮಳೆ ಮತ್ತು ಪ್ರವಾಹದಿಂದ ಉಂಟಾದ ಪರಿಸ್ಥಿತಿಯಲ್ಲಿ ಸಾಲ ಮಾಡದೇ ಅಭಿವೃದ್ಧಿ ಮಾಡುವುದು ಹೇಗೆ ಸಾಧ್ಯ? ಆರ್ಥಿಕ ಚೈತನ್ಯ ನೀಡಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.

ADVERTISEMENT

ಕೊರೋನಾ ಸಾಂಕ್ರಾಮಿಕ ವಿಶ್ವವ್ಯಾಪಿಯಾಗಿ ಬಂದೆರಗಿದಾಗ ದಿಢೀರ್‌ ಪರಿಹಾರ ನೀಡಲು ಸರ್ಕಾರದ ಬಳಿ ಯಾವುದೇ ಮಂತ್ರ ದಂಡ ಇರುವುದಿಲ್ಲ ಅಥವಾ ಸರ್ಕಾರದ ಬೊಕ್ಕಸ ಅಕ್ಷಯಪಾತ್ರೆಯೇನೂ ಅಲ್ಲ. ಇದು ಪ್ರತಿ ಪಕ್ಷ ಮತ್ತು ಆಡಳಿತ ಪಕ್ಷದವರಿಗೆ ಗೊತ್ತಿರದ ಸಂಗತಿಯೇನಲ್ಲ ಎಂದು ಯಡಿಯೂರಪ್ಪ ತಿಳಿಸಿದರು.

ಹಿಂದಿನ ತಿಂಗಳುಗಳಲ್ಲಿ ವಿತ್ತೀಯ ಶಿಸ್ತು ಕಾಪಾಡಿಕೊಂಡಿದ್ದರ ಫಲ ಮತ್ತು ಕಳೆದ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳು ಸುಧಾರಿಸಿದೆ. ಆದರೂ 10 ತಿಂಗಳ ಕಾಲ ನಿಸ್ತೇಜಗೊಂಡಿದ್ದ ಆರ್ಥಿಕತೆ ಕೇವಲ 3 ತಿಂಗಳಲ್ಲಿ ಪರಿಪೂರ್ಣವಾಗಿ ಚೇತರಿಸಿಕೊಳ್ಳುವುದು ಸುಲಭ ಸಾಧ್ಯವಲ್ಲ. ಅದು ಸಾಧ್ಯವಾಗಿದೆ. ಈ ಚೇತರಿಕೆ ನಮಗೆ ಭರವಸೆಯ ಆಶಾ ಕಿರಣವಾಗಿ ಕಂಡಿದೆ. ಈ ಭರವಸೆಯ ಪರಿಸ್ಥಿತಿ ಮುಂದುವರೆಯಲು ಸಕಲ ಪ್ರಯತ್ನ ಮಾಡಲಿದ್ದೇವೆ ಎಂದು ಅವರು ಹೇಳಿದರು.

ವಿರೋಧ ಪಕ್ಷಗಳ ವಿರೋಧಾಭಾಸ

ಒಂದು ಕಡೆ ಬದ್ಧತಾ ವೆಚ್ಚ ಕಡಿಮೆ ಮಾಡಬೇಕು ಎಂದು ವಿರೋಧ ಪಕ್ಷಗಳು ಹೇಳುತ್ತವೆ. ಇನ್ನೊಂದು ಕಡೆ ಎಲ್ಲ ಖಾಲಿ ಹುದ್ದೆಗಳನ್ನೂ ಭರ್ತಿ ಮಾಡಬೇಕು ಎಂದು ಹೇಳುತ್ತಾರೆ. ಇದು ಹೇಗೆ ಸಾಧ್ಯ? ರಾಜ್ಯದಲ್ಲಿ ಒಟ್ಟು ಇರುವ ಹುದ್ದೆಗಳ ಸಂಖ್ಯೆ 7,68,975. ಇದರಲ್ಲಿ 5,16,073 ಹುದ್ದೆಗಳು ನೇರ ನೇಮಕಾತಿ ಮೂಲಕ ಭರ್ತಿ ಆಗಿವೆ. ಖಾಲಿ ಇರುವ ಬಹುತೇಕ ಹುದ್ದೆಗಳು ಗ್ರೂಪ್‌ ಡಿ ಮತ್ತು ಡೆಟಾ ಎಂಟ್ರಿ ಆಪರೇಟರ್‌ ಹಾಗೂ ಚಾಲಕರ ಹುದ್ದೆಗಳು. ಈ ಹುದ್ದೆಗಳಿಗೆ ಸರ್ಕಾರದ ನೀತಿಯ ಪ್ರಕಾರ ಹೊರ ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ. ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ಸರ್ಕಾರಕ್ಕೆ ₹12,000 ಕೋಟಿ ಅಧಿಕ ವೆಚ್ಚವಾಗುತ್ತದೆ ಎಂದರು.

ಶುಲ್ಕ ಪರಿಷ್ಕರಣೆ ಮೂಲಕ ಆದಾಯ ಹೆಚ್ಚಳ

ವಿವಿಧ ಇಲಾಖೆಗಳಲ್ಲಿ ನೀಡುತ್ತಿರುವ ಸೇವೆಗಳಿಗೆ ವಿಧಿಸುತ್ತಿರುವ ಶುಲ್ಕಗಳನ್ನು ಪರಿಷ್ಕರಿಸುವ ಮೂಲಕ ಸರ್ಕಾರ ತೆರಿಗೆಯೇತರ ಆದಾಯವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಒಂದು ಸಮಿತಿಯನ್ನೂ ರಚಿಸಲಾಗಿದೆ ಎಂದು ಹೇಳಿದರು.

ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ನೀಡಿರುವ ಸಾಲ ವಸೂಲಿಗೆ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೆ, ಬೆಂಗಳೂರು ಮತ್ತು ಇತರ ಮಹಾನಗರಗಳ ಪಾಲಿಕೆಗಳಲ್ಲಿರುವ ಸರ್ಕಾರಿ ಜಮೀನನ್ನು ವಾಣಿಜ್ಯ ಉಪಯೋಗಕ್ಕಾಗಿ ಅಭಿವೃದ್ಧಿಪಡಿಸಲು ಪರಿಶೀಲಿಸಲಾಗುವುದು. ಇದರಿಂದ ಸಾಲವಲ್ಲದ ಬಂಡವಾಳ ಸ್ವೀಕೃತಿ ಹೆಚ್ಚಿಸಬಹುದು ಎಂದರು.

ಕರ್ನಾಟಕ ಮಾತ್ರವಲ್ಲ ನೆರೆಯ ತಮಿಳುನಾಡು, ಕೇರಳ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳೂ ಕೊರತೆ ಬಜೆಟ್‌ ಮಂಡಿಸಿವೆ. ಈ ರಾಜ್ಯಗಳೂ ರಾಜಸ್ವ ಕೊರತೆ ಎದುರಿಸುತ್ತಿವೆ ಎಂದು ಯಡಿಯೂರಪ್ಪ ಹೇಳಿದರು.

* ಬದ್ಧತಾ ವೆಚ್ಚ ಹೆಚ್ಚಳ

2020–21 ನೇ ಸಾಲಿನಲ್ಲಿ ರಾಜ್ಯದ ಬದ್ಧತಾ ವೆಚ್ಚಗಳಾಗಿರುವ ವೇತನಗಳು, ಪಿಂಚಣಿ, ಬಡ್ಡಿ ಮರುಪಾವತಿ ಇತ್ಯಾದಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಂದಾಜು ₹13,405 ಕೋಟಿ ಹೆಚ್ಚಳವಾಗಿದೆ.

* ವಿತ್ತೀಯ ಕೊರತೆ

2020–21 ನೇ ಸಾಲಿನಲ್ಲಿ ರಾಜ್ಯದ ವಿತ್ತೀಯ ಕೊರತೆ ₹46,072 ಕೋಟಿ ಇತ್ತು. 2021–22 ನೇ ಸಾಲಿನಲ್ಲಿ ವಿತ್ತೀಯ ಕೊರತೆ ₹59,240 ಕೋಟಿಗೆ ಏರಲಿದೆ.

*ಸಾಲದ ಪ್ರಮಾಣ

2020–21 ರ ವರ್ಷಾಂತ್ಯಕ್ಕೆ ಒಟ್ಟಾರೆ ಬಾಕಿ ಇರುವ ಸಾಲ ಪ್ರಮಾಣ ₹3,68,692 ಕೋಟಿ. ಇದು ಜಿಎಸ್‌ಡಿಪಿಯ ಶೇ 20.4 ರಷ್ಟು. 2021–21 ನೇ ವರ್ಷಾಂತ್ಯಕ್ಕೆ ಒಟ್ಟಾರೆ ಬಾಕಿ ಉಳಿಯುವ ಸಾಲದ ಪ್ರಮಾಣ ₹4,57,899 ಕೋಟಿ. ಅಂದರೆ ಜಿಎಸ್‌ಡಿಪಿಯ ಶೇ.26.9 ರಷ್ಟು. ತಮಿಳುನಾಡು ಶೇ 26.7 ಮತ್ತು ಕೇರಳ ಶೇ 37.2 ರಷ್ಟು ಸಾಲ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.