ಮೈಸೂರು: ‘ಸಮುದಾಯ ಆರೋಗ್ಯ ಅಧಿಕಾರಿ(ಸಿಎಚ್‌ಒ)ಗಳಿಗೆ ಬಾಕಿ ಉಳಿದಿರುವ 2022–23ನೇ ಸಾಲಿನ ಶೇ 5ರಷ್ಟು ವೇತನ ಹೆಚ್ಚಿಸಲಾಗುವುದು. 3 ಹಾಗೂ 5 ವರ್ಷ ಸೇವಾವಧಿ ಪೂರ್ಣಗೊಳಿಸಿದವರಿಗೆ ಮಾರ್ಗಸೂಚಿ ಅನ್ವಯ ಬೋನಸ್ ನೀಡಲಾಗುವುದು ಮತ್ತು ಅಂತರಜಿಲ್ಲಾ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
‘ಆರು ವರ್ಷ ಸೇವೆ ಪೂರೈಸಿದವರ ಕೆಲಸ ಕಾಯಂಗೊಳಿಸಬೇಕು’ ಎಂಬ ಪ್ರಮುಖ ಬೇಡಿಕೆ ಮುಂದಿಟ್ಟುಕೊಂಡು ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ (ಎನ್‌ಎಚ್‌ಎಂ) ಗುತ್ತಿಗೆ ನೌಕರರ ಸಂಘದಿಂದ ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ‘ಪ್ರಥಮ ರಾಜ್ಯಮಟ್ಟದ ಸಮುದಾಯ ಆರೋಗ್ಯ ಅಧಿಕಾರಿಗಳ ಸಂರಕ್ಷಣಾ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹಿಂದಿನ ಸರ್ಕಾರದಲ್ಲಿ ಸಿಎಚ್‌ಒಗಳಿಗೆ ಶೇ 5ರಷ್ಟು ವೇತನ ಹೆಚ್ಚಿಸಿರಲಿಲ್ಲ. ಅದನ್ನೀಗ ನಾವು ಮಾಡುತ್ತೇವೆ. ಆರೋಗ್ಯ ವಿಮೆಯನ್ನು ಒದಗಿಸಲಾಗುವುದು. ಜೀವ ವಿಮೆಯ ಯೋಜನೆಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ’ ಎಂದು ತಿಳಿಸಿದರು.
‘ಕೆಲಸ ಕಾಯಂ ಮಾಡಬೇಕು ಎನ್ನುವುದು ನಿಮ್ಮ ಪ್ರಮುಖ ಬೇಡಿಕೆಯಾಗಿದೆ. ಮಾಡುತ್ತೇನೆ ಎಂದು ನಿಂತಲ್ಲೇ ಹೇಳಲಾಗುವುದಿಲ್ಲ. ಗುತ್ತಿಗೆ ನೌಕರರು ಎಲ್ಲ ಇಲಾಖೆಗಳಲ್ಲೂ ಇದ್ದಾರೆ. ಕಾಯಂಗೊಳಿಸುವಂತೆ ಅವರೆಲ್ಲರಿಂದಲೂ ಬೇಡಿಕೆ ಇದೆ. ಸಿಎಚ್‌ಒಗಳ ಬಗ್ಗೆ ಕಾಳಜಿಯಿಂದ ಚರ್ಚೆ ಮಾಡುತ್ತೇವೆ. ಬೇಡಿಕೆಗಳನ್ನು ಮಂಡಿಸುವುದು ನಿಮ್ಮ ಹಕ್ಕು; ಪರಿಶೀಲನೆ ನಡೆಸುವುದು ನಮ್ಮ ಕರ್ತವ್ಯ’ ಎಂದರು.
‘ನಿಮ್ಮ ಬೇಡಿಕೆ ನ್ಯಾಯಯುತವಾಗಿವೆ. ಕೆಲವನ್ನು ಈಡೇರಿಸಲಾಗುವುದು. ಇನ್ನು ಕೆಲವನ್ನು ಚರ್ಚಿಸುತ್ತೇವೆ. ಸರ್ಕಾರ ನಿಮ್ಮ ಜೊತೆಗಿದೆ’ ಎಂದು ಹೇಳಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ಸಿಎಚ್‌ಸಿಗಳು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿ ಬರುತ್ತೀರಿ. ಆದ್ದರಿಂದ ಕೆಲಸ ಕಾಯಂಗೊಳಿಸುವುದು ಸದ್ಯಕ್ಕೆ ಕಷ್ಟಸಾಧ್ಯ. ಕೇಂದ್ರ ಸರ್ಕಾರದ ಜೊತೆಗೂ ನಾವು ಚರ್ಚಿಸಬೇಕಾಗುತ್ತದೆ. ಅಲ್ಲದೇ, ಎನ್‌ಎಚ್‌ಎಂನಲ್ಲಿ ಬರುವ ಎಲ್ಲರಿಗೂ ಅನ್ವಯಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಪ್ರೋತ್ಸಾಹಧನ ಹೆಚ್ಚಳಕ್ಕೆ ಸಿಎಂ ಜೊತೆ ಚರ್ಚಿಸಿತ್ತೇನೆ’ ಎಂದು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕ ಕೆ.ಹರೀಶ್‌ಗೌಡ, ವಿಧಾನಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಕೆ.ವಿವೇಕಾನಂದ ಸಂಘದ ಅಧ್ಯಕ್ಷ ಮಮಿತ ಗಾಯಕವಾಡ ಪಾಲ್ಗೊಂಡಿದ್ದರು.
ಸಿಎಚ್‌ಒ ಹುದ್ದೆಗೆ ಹೊಸದಾಗಿ ವೃಂದ ಸೃಜಿಸಿ ಕಾಯಂಗೊಳಿಸಬೇಕು
ಪ್ರೋತ್ಸಾಹಧನವನ್ನು ₹ 6ಸಾವಿರದಿಂದ ₹ 15ಸಾವಿರಕ್ಕೆ ಏರಿಸಬೇಕು
ಎನ್‌ಎಚ್‌ಎಂ ಅಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ಶೇ 15ರಷ್ಟು ವೇತನ ಹೆಚ್ಚಿಸಲಾಗುತ್ತದೆ. ಅದರಲ್ಲಿ ಸಿಎಚ್‌ಒಗಳನ್ನೂ ಪರಿಗಣಿಸಬೇಕು.
3 ವರ್ಷ ಸೇವೆ ಪೂರೈಸಿದವರಿಗೆ ಶೇ 10 ಹಾಗೂ 5 ವರ್ಷ ಸೇವೆ ಮಾಡಿದವರಿಗೆ ಶೇ 5ರಷ್ಟು ಬೋನಸ್ ಕೊಡಬೇಕು.
ಸರ್ಕಾರಿ ನೌಕರರಂತೆ ಸಿಎಚ್‌ಒಗಳಿಗೂ ಆರೋಗ್ಯ ವಿಮೆ ಜಾರಿಗೊಳಿಸಬೇಕು.
ನಾನೂ ಹಿಂದೆ ಯೋಗ ಮಾಡುತ್ತಿದ್ದೆ. ಈಗ ಬಿಟ್ಟು ಬಿಟ್ಟಿದ್ದೀನಿ. ಅದಕ್ಕಾಗಿ ಸ್ವಲ್ಪ ದಪ್ಪ ಆಗ್ಬಿಟ್ಟಿದ್ದೀನಿಸಿದ್ದರಾಮಯ್ಯ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.