ADVERTISEMENT

ಐದು ಗ್ಯಾರಂಟಿಗಳ ಜಾರಿಗೆ ಸಚಿವ ಸಂಪುಟ ಒಪ್ಪಿಗೆ: ಸಿದ್ದರಾಮಯ್ಯ ಘೋಷಣೆ

ಸುದೀರ್ಘ ಸಚಿವ ಸಂಪುಟ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜೂನ್ 2023, 10:29 IST
Last Updated 2 ಜೂನ್ 2023, 10:29 IST
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ   

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಜಾರಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಬೆಳಿಗ್ಗೆಯಿಂದ ನಡೆದ ಸುದೀರ್ಘ ಸಚಿವ ಸಂಪುಟ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದಾರೆ.

ಮೊದಲ ಗ್ಯಾರಂಟಿಯಾಗಿ ‘ಗೃಹ ಜ್ಯೋತಿ‘ ಯೋಜನೆ ಜಾರಿ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಹಿಂದಿನ 12 ತಿಂಗಳ ವಿದ್ಯುತ್ ಬಳಕೆಯ ಸರಾಸರಿಗೆ ಅದರ ಶೇಕಡ 10ರಷ್ಟನ್ನು ಸೇರಿಸಿ ಗರಿಷ್ಠ 200 ಯೂನಿಟ್‌ವರೆಗೆ ಎಲ್ಲ ಮನೆಗಳಿಗೂ ಉಚಿತ ವಿದ್ಯುತ್ ವಿದ್ಯುತ್ ನೀಡಲಾಗುತ್ತದೆ.

ಎರಡನೇ ಗ್ಯಾರಂಟಿಯಾಗಿ ಗೃಹಲಕ್ಷ್ಮೀ ಯೋಜನೆಯನ್ನು ಆಗಸ್ಟ್ 15ರಿಮದ ಜಾರಿಗೆ ಸರ್ಕಾರ ನಿರ್ಧರಿಸಿದೆ. ಮನೆ ಯಜಮಾನಿಗೆ ಪ್ರತಿ ತಿಂಗಳು ₹2000 ಸಿಗಲಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಜೂನ್ 15ರಿಂದ ಜುಲೈ 15ರವರೆಗೆ ಅವಕಾಶ ಇರಲಿದೆ. ಬ್ಯಾಂಕ್‌ ಪಾಸ್‌ಬುಕ್, ಆಧಾರ್ ದಾಖಲೆಗಳ ಜೊತೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಎಪಿಎಲ್, ಬಿಪಿಎಲ್ ಷರತ್ತುಗಳಿಲ್ಲದೆ ಎಲ್ಲ ಮನೆ ಯಜಮಾನಿಯರಿಗೂ ಯೋಜನೆ ಅನ್ವಯಿಸಲಿದೆ.

ADVERTISEMENT

ಸಾಮಾಜಿಕ ಭದ್ರತೆ ಪಿಂಚಣಿದಾರರಿಗೂ(ವಿಧವೆಯರು, ಹಿರಿಯ ನಾಗರಿಕರು ಮತ್ತು ಅಂಗವಿಕಲರು) 2000 ರೂ. ಕೊಡತೇವೆ.

ಮೂರನೇ ಗ್ಯಾರಂಟಿಯಾಗಿ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ ತಿಂಗಳಿಗೆ 10 ಕೆ.ಜಿ ಅಕ್ಕಿ ವಿತರಣೆಗೆ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದು ಜುಲೈ ತಿಂಗಳಿನಿಂದ ಜಾರಿಗೆ ಬರಲಿದೆ.

ನಾಲ್ಕನೇ ಗ್ಯಾರಂಟಿಯಾಗಿ ಶಕ್ತಿ ಯೋಜನೆಯಡಿ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಿಸಲಾಗಿದೆ. ಎಸಿ, ಸ್ಲೀಪರ್ ಬಸ್‌ಗಳನ್ನು ಹೊರತುಪಡಿಸಿ ರಾಜ್ಯಾದಾದ್ಯಂತ ಎಲ್ಲೆಡೆ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ರಾಜ್ಯದ ಒಳಗೆ ಸಂಚರಿಸುವ ಬಸ್‌ಗಳಲ್ಲಿ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಬಸ್‌ನಲ್ಲಿ ಪುರುಷರಿಗೆ ಶೇಕಡ 50ರಷ್ಟು ಆಸನಗಳನ್ನು ಮೀಸಲಿಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿದ್ಯಾರ್ಥಿನಿಯರಿಗೂ ಯೋಜನೆ ಅನ್ವಯವಾಗುತ್ತದೆ. ಜೂನ್ 11ರಂದು ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಐದನೇ ಗ್ಯಾರಂಟಿಯಾಗಿ ಯುವನಿಧಿ ಜಾರಿಯನ್ನು ಸರ್ಕಾರ ಘೋಷಿಸಿದೆ. 2022-23ರಲ್ಲಿ ವ್ಯಾಸಂಗ ಮಾಡಿದ ಎಲ್ಲ ವೃತ್ತಿ ಪರ, ಪದವಿ ಕೋರ್ಸ್‌ ಪೂರೈಸಿದವರಿಗೆ 24 ತಿಂಗಳು ವರೆಗೆ ಪ್ರತಿ ತಿಂಗಳಿಗೆ 3 ಸಾವಿರ ರೂ., ಡಿಪ್ಲೊಮಾ ಮಾಡಿದವರಿಗೆ 1500 ರೂ. ನೀಡಲಾಗುತ್ತದೆ. ಸರ್ಕಾರಿ ಅಥವಾ ಖಾಸಗಿ ಕೆಲಸ ಸಿಕ್ಕಿದರೆ ಭತ್ಯೆ ಸ್ಥಗಿತಗೊಳ್ಳುತ್ತದೆ. ಕಳೆದ ವರ್ಷ 4.5 ಲಕ್ಷ ವಿದ್ಯಾರ್ಧಿಗಳು ಪದವಿ ಪೂರೈಸಿದ್ದು, ಭತ್ಯೆ ಬೇಕಾದವರು ಅರ್ಜಿ ಹಾಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.