ADVERTISEMENT

ವಿ.ವಿಗಳಲ್ಲಿ ಸೆಗಣಿ, ಗಂಜಳಗಳ ಸಂಶೋಧನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ

ವಿಶ್ವವಿದ್ಯಾಲಯಗಳ ಕುಲಪತಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 16:27 IST
Last Updated 21 ಫೆಬ್ರುವರಿ 2026, 16:27 IST
ರಾಜ್ಯದ 32 ಸಾರ್ವಜನಿಕ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮಾವೇಶದಲ್ಲಿ ಸಿದ್ದರಾಮಯ್ಯ, ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹಸ್ತಲಾಘವ.
ರಾಜ್ಯದ 32 ಸಾರ್ವಜನಿಕ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮಾವೇಶದಲ್ಲಿ ಸಿದ್ದರಾಮಯ್ಯ, ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹಸ್ತಲಾಘವ.   

ಬೆಂಗಳೂರು: ‘ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವ ಬೆಳೆಸುವ ಬದಲು ಸೆಗಣಿ, ಗಂಜಳಗಳ ಕುರಿತು ಭೂತಕಾಲದ ಊಹಾತ್ಮಕ ಸಂಗತಿಗಳ ಕುರಿತು ಮೌಢ್ಯ ಬೆಳೆಸುತ್ತಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.

ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯದ 32 ಸಾರ್ವಜನಿಕ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

ಊಹಾತ್ಮಕ ಸಂಗತಿಗಳ ಕುರಿತು ಸಂಶೋಧನೆಗೆ ಮುಂದಾಗುವ ವಿದ್ಯಾರ್ಥಿಗಳು ಮುಂದೆ ನಿರುಪಯುಕ್ತ ಪದವೀಧರರಾಗುತ್ತಾರೆ. ಸಂವಿಧಾನದ ಅಶಯಗಳನ್ನು ಒಳಗೊಂಡ ಶಿಕ್ಷಣದಿಂದ ಮಾತ್ರ ನಿಜವಾದ ಉನ್ನತ ಶಿಕ್ಷಣದ ಪ್ರಗತಿ ಸಾಧ್ಯ ಎಂದರು.

ADVERTISEMENT

ಇತ್ತೀಚೆಗೆ ನಡೆದ ಎಐ ಶೃಂಗಸಭೆಯಲ್ಲಿ ಚೀನಾ ತಯಾರಿಸಿದ ಎಐ ರೋಬೋಟ್‌ ನಾಯಿಯನ್ನು ತಾನೇ ಸಿದ್ಧಪಡಿಸಿದ್ದಾಗಿ ಹೇಳಿಕೊಂಡ ಉತ್ತರ ಪ್ರದೇಶದ ಗೊಲ್ಗೊಟಿಯಾ ವಿಶ್ವವಿದ್ಯಾಲಯವು ಭಾರತದ ಮರ್ಯಾದೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಣ್ಣುಪಾಲು ಮಾಡಿತು ಎಂದು ಹೇಳಿದರು. 

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಮಾತನಾಡಿ, ‘ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಸಂಖ್ಯೆ ಹೆಚ್ಚಿಸಲು ಸೂಕ್ತ ಕಾರ್ಯತಂತ್ರ ರೂಪಿಸಬೇಕು. ಖಾಸಗಿ ವಿಶ್ವವಿದ್ಯಾಲಯಗಳಲ್ಲಿ  ಹೆಚ್ಚಿನ ಶುಲ್ಕವಿದ್ದರೂ ವಿದ್ಯಾರ್ಥಿಗಳ ಪ್ರವೇಶ ಹೆಚ್ಚಿದೆ. ವಿದ್ಯಾರ್ಥಿಗಳ ಪ್ರವೇಶ ಮತ್ತು ಪರೀಕ್ಷೆಗಳನ್ನು ನಿಗದಿತ ಸಮಯದ ಒಳಗೆ ನಡೆಸಬೇಕು. ಪರೀಕ್ಷಾ ಫಲಿತಾಂಶಗಳನ್ನು ಕಾಲಮಿತಿಯ ಒಳಗೆ ಪ್ರಕಟಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಕುಲಪತಿಗಳು, ಕುಲಸಚಿವರ ನಡುವೆ ಉತ್ತಮ ಸಮನ್ವಯ ಮೂಡಿಸಬೇಕು. ಅವಶ್ಯಕತೆಗಳಿಗೆ ಅನುಗುಣವಾಗಿ ಉದ್ಯೋಗ ಆಧಾರಿತ ಕೋರ್ಸ್‌ಗಳು, ಪಠ್ಯಕ್ರಮವನ್ನು ನವೀಕರಿಸಬೇಕು. ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು, ಕ್ಯಾಂಪಸ್‌ ಪರಿಸರ ಸುಧಾರಣೆ ಮಾಡಬೇಕು’ ಎಂದು ಸೂಚಿಸಿದರು.


ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್‌, ಕಾರ್ಯದರ್ಶಿ ಖುಷ್ಬೂ ಚೌಧರಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತೆ ಎನ್‌.ಮಂಜುಶ್ರೀ, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ  ಎಸ್.ಆರ್.ನಿರಂಜನ್‌ ಉಪಸ್ಥಿತರಿದ್ದರು.

ಬಜೆಟ್‌ನಲ್ಲಿ ಹೆಚ್ಚು ಅನುದಾನ ಕೊಡಿ: ಗೆಹಲೋತ್‌

‘ವಿಶ್ವವಿದ್ಯಾಲಯಗಳು ಯಾವುದೇ ಸ್ವಂತ ಆದಾಯ ಹೊಂದಿಲ್ಲ. ಹಾಗಾಗಿ ಸಾರ್ವಜನಿಕ ವಿಶ್ವವಿದ್ಯಾಲಯಗಳ ಮೇಲೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಕಾಳಜಿ ತೋರಬೇಕು. ಉನ್ನತ ಶಿಕ್ಷಣ ಕ್ಷೇತ್ರಕ್ಕೆ 2026–27ನೇ ಸಾಲಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಬೇಕು. ಖಾಲಿ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಬೇಕು’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಸಲಹೆ ನೀಡಿದರು.

‘ಕೇಂದ್ರ ಸರ್ಕಾರ ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸಬೇಕು. ವಿಶ್ವವಿದ್ಯಾನಿಲಯದ ನೌಕರರ ನಡುವಿನ ವಿವಾದಗಳು ಕುಲಪತಿ ಮತ್ತು ಸಿಂಡಿಕೇಟ್‌ ಸದಸ್ಯರ ನಡುವಿನ ಸಂಘರ್ಷ ತಡೆಯಬೇಕು. ಸಿಎಸ್‌ಆರ್‌ ನಿಧಿ ಬಳಸಿಕೊಂಡು ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು’ ಎಂದರು. 

ಪಿಂಚಣಿ ಸಮಸ್ಯೆ ಸೇರಿದಂತೆ ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿಗತಿಗಳ ಅಧ್ಯಾಯನಕ್ಕೆ ಸಮಿತಿ ರಚಿಸಲು ಉನ್ನತ ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ.
–ಸಿದ್ದರಾಮಯ್ಯ, ಮುಖ್ಯಮಂತ್ರಿ
ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಭಾರತೀಯ ಸಂಪ್ರದಾಯದ ಸಮವಸ್ತ್ರ ಧರಿಸಲು ಆದ್ಯತೆ ನೀಡಬೇಕು
–ಥಾವರಚಂದ್‌ ಗೆಹಲೋತ್‌, ರಾಜ್ಯಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.