ಬಿ.ವೈ.ವಿಜಯೇಂದ್ರ ಮತ್ತು ಸಿದ್ದರಾಮಯ್ಯ
ಮೈಸೂರು: ‘ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲು ಕಾಂಗ್ರೆಸ್‌ನಲ್ಲಿ ಈಗಾಗಲೇ ವೇದಿಕೆ ಸಿದ್ಧವಾಗಿದ್ದು, ಅವರು ದೆಹಲಿಗೆ ವರ್ಗಾವಣೆಯಾಗುವುದು ನಿಶ್ಚಿತ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಿದ್ದರಾಮಯ್ಯರ ರಾಜೀನಾಮೆ ಪಡೆಯಲು ಭೂಮಿಕೆ ಸಜ್ಜು ಮಾಡಿದ್ದಾರೆ. ಕೆಲ ದಿನಗಳ ಹಿಂದೆ ರಾಜ್ಯಕ್ಕೆ ಭೇಟಿ ನೀಡಿ ಕಾಂಗ್ರೆಸ್ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ.ಸಿದ್ದರಾಮಯ್ಯರ ಬಗ್ಗೆ ಕಾಂಗ್ರೆಸ್ ಶಾಸಕರಲ್ಲಿ ವಿಶ್ವಾಸ ಉಳಿದಿಲ್ಲ’ ಎಂದರು.
ಹೈಕಮಾಂಡ್‌ಗೆ ಬಿಟ್ಟದ್ದು:
'ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಿ ಕಳೆದ ಒಂದೂವರೆ ವರ್ಷದಿಂದ ಪಕ್ಷದ ಸಂಘಟನೆ ಮಾಡಿದ್ದೇನೆ.ಈ ಹುದ್ದೆಯಲ್ಲಿ ನನ್ನನ್ನು ಮುಂದುವರಿಸುವುದು, ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟದ್ದು' ಎಂದು ವಿಜಯೇಂದ್ರ ಹೇಳಿದರು.
‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪರಿಣಾಮಕಾರಿಯಾದ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇನೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ, ವರಿಷ್ಠರಿಗೆ ತೃಪ್ತಿಯಿದೆ. ಹೀಗಾಗಿ ನನ್ನನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುತ್ತಾರೆ ಎಂಬ ವಿಶ್ವಾಸವಿದೆ' ಎಂದರು.
‘ತಮಿಳುನಾಡಿನಲ್ಲಿ ಕಾಂಗ್ರೆಸ್‌ನವರ ಮಿತ್ರಪಕ್ಷವಿದೆ. ಹೀಗಾಗಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ ಒಪ್ಪಿಸಲಿ. ನಾವು ಕೇಂದ್ರವನ್ನು ಒಪ್ಪಿಸುತ್ತೇವೆ' ಎಂದರು.
'ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್ ಸಂಘಟನೆಯನ್ನು ಬ್ಯಾನ್ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮತ್ತಿತರರು ಪುಕ್ಕಟ್ಟೆ ಪ್ರಚಾರಕ್ಕಾಗಿ ಮೂರ್ಖತನದ ಹೇಳಿಕೆಗಳನ್ನು ನೀಡುತ್ತಿದ್ದು, ಜನರ ಮುಂದೆ ನಗೆಪಾಟೀಲಿಗೆ ಈಡಾಗುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ನವರು ತಿರುಕನ ಕನಸು ಕಾಣುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.
‘ರಸ್ತೆ ಅಭಿವೃದ್ಧಿ ಬೇಕು ಎಂದರೆ ಗ್ಯಾರಂಟಿ ಯೋಜನೆ ಮತ್ತು ಅಕ್ಕಿ ಕೇಳಬೇಡಿ’ ಎಂಬ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ರಾಯರೆಡ್ಡಿ ಹೇಳಿಕೆ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಗೆ ಹಿಡಿದ ಕನ್ನಡಿ. ಅವರದ್ದು ದುರಹಂಕಾರದ ಹೇಳಿಕೆ. ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಈಗ ಗ್ಯಾರಂಟಿ ಬೇಕೋ ರಸ್ತೆ ಬೇಕೋ ಎಂದು ಕೇಳಿದರೆ ಹೇಗೆ? ಸಿದ್ದರಾಮಯ್ಯ ಅವರೇ ರಾಯರೆಡ್ಡಿ ಮೂಲಕ ಇಂತಹ ಮಾತುಗಳನ್ನು ಹೇಳಿಸಿದ್ದಾರೆ’ ಎಂದು ದೂರಿದರು.
ಶಿವಮೊಗ್ಗ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿ ‘ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿರುವುದೇ ಇಂತಹ ಗಲಾಟೆಗೆ ಕಾರಣ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದರೆ ಅದಕ್ಕೆ ಸರ್ಕಾರವೇ ಹೊಣೆ’ ಎಂದರು.
ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಮಾಜಿ ಸಂಸದ ಪ್ರತಾಪ ಸಿಂಹ, ಹಿಂದುಳಿದ ಮೋರ್ಚ ರಾಜ್ಯ ಘಟಕದ ಅಧ್ಯಕ್ಷ ರಘು ಕೌಟಿಲ್ಯ, ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.