ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರ ತಲಾ ಆದಾಯ ಹೆಚ್ಚಿದ್ದು, ರಾಜ್ಯವು ತಲಾ ಆದಾಯದಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಮಾಣೆಕ್ ಷಾ ಮೈದಾನದಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹರಣ ನೆರವೇರಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ, ಸರ್ಕಾರದ ನೀತಿಗಳು, ಅಭಿವೃದ್ದಿ ಯೋಜನೆಗಳ ಜಾರಿ, ಆಶಯಗಳನ್ನು ಬಿಡಿಸಿಟ್ಟರು.
‘ಕರ್ನಾಟಕವು ಈಗ ತಲಾ ಆದಾಯದ ವಿಚಾರದಲ್ಲಿ ಮೊದಲ ಸ್ಥಾನದಲ್ಲಿದೆ. ತಲಾ ಆದಾಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಶೇ 101ರಷ್ಟು ಪ್ರಗತಿಯನ್ನು ಸಾಧಿಸಿದ ರಾಜ್ಯ ನಮ್ಮ ಕರ್ನಾಟಕವಾಗಿದೆ. 2013-14 ರಲ್ಲಿ ಸ್ಥಿರ ದರಗಳಲ್ಲಿ ₹ 1,01,858 ಗಳಷ್ಟಿದ್ದ ತಲಾದಾಯವು 2024-25ರ ವೇಳೆಗೆ ₹2,04,605 ಗೆ ತಲುಪಿದೆ’ ಎಂದು ತಿಳಿಸಿದರು.
‘ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ ಯೋಜನೆಗಳಿಗೆ ಈವರೆಗೆ ₹96 ಸಾವಿರ ಕೋಟಿಗೂ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಿದ್ದೇವೆ. ಮಧ್ಯವರ್ತಿಗಳ ಹಾವಳಿಯಿಲ್ಲದೆ ಜನರಿಗೆ ತಲುಪುವ ಯೋಜನೆಗಳು ರಾಜ್ಯದ ಜನರ ತಲಾ ಆದಾಯದ ಜತೆಗೆ ಕಾರ್ಮಿಕ ಶಕ್ತಿಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಶೇ 23 ರಷ್ಟು ಹೆಚ್ಚಿಸಿವೆ ಎಂದು ಹಲವು ಅಧ್ಯಯನಗಳು ಹೇಳುತ್ತಿವೆ’ ಎಂದು ಹೇಳಿದರು.
‘ಗ್ಯಾರಂಟಿ ಯೋಜನೆಗಳಿಗೆ ಎರಡು ವರ್ಷದಲ್ಲಿ ನಮ್ಮ ಸರ್ಕಾರ ಬಲ ತುಂಬಿದೆ. ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿ, ತಲಾ ಆದಾಯದಲ್ಲೂ ಏರಿಕೆ ಕಂಡಿದೆ’ ಎಂದು ಯೋಜನೆಗಳನ್ನು ಸಮರ್ಥಿಸಿಕೊಂಡರು.
‘ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳೂ ಸೇರಿದಂತೆ ಸಹಾಯಧನ, ಪ್ರೋತ್ಸಾಹ ಧನ, ವಿದ್ಯಾರ್ಥಿವೇತನ, ಸಾಮಾಜಿಕ ಯೋಜನೆಗಳಿಗಾಗಿ ವಿನಿಯೋಗಿಸುತ್ತಿರುವ ಪಿಂಚಣಿ ಮುಂತಾದವುಗಳಿಗಾಗಿ ₹ 1.12 ಲಕ್ಷ ಕೋಟಿಗಳಿಗೂ ಹೆಚ್ಚಿನ ಮೊತ್ತವನ್ನು ಜನ ಕಲ್ಯಾಣಕ್ಕಾಗಿ ಖರ್ಚು ಮಾಡುತ್ತಿದೆ. ಕಲ್ಯಾಣ ಕಾರ್ಯಕ್ರಮಗಳ ಜತೆ ಬಂಡವಾಳ ವೆಚ್ಚಗಳಿಗೆ ಈ ವರ್ಷ ₹ 83,200 ಕೋಟಿ ವಿನಿಯೋಗಿಸುತ್ತಿದ್ದೇವೆ’ ಎಂದು ವಿವರಿಸಿದರು.
‘ಬಸವಾದಿ ಶರಣರ ಧ್ಯೇಯದಲ್ಲಿ ನಂಬಿಕೆಯಿಟ್ಟು ರಾಜ್ಯವು ಅಭಿವೃದ್ಧಿ ಮಾದರಿಗಳನ್ನು ಹುಟ್ಟು ಹಾಕಿದೆ. ಇದಕ್ಕೆ ‘ಕರ್ನಾಟಕ ಅಭಿವೃದ್ಧಿ ಮಾದರಿ’ಎಂಬ ಹೆಸರಿನಲ್ಲಿ ಮನ್ನಣೆ ದೊರೆತಿದೆ. ವಿಶ್ವಸಂಸ್ಥೆ ಮುಖ್ಯಸ್ಥ ಫಿಲೆಮಾನ್ ಯಾಂಗ್ರ ಅವರು ಗ್ಯಾರಂಟಿ ಯೋಜನೆಗಳ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಈ ಮೂಲಕ ನಮ್ಮ ಯೋಜನೆಗಳು ವಿಶ್ವಮಾನ್ಯಗೊಂಡಿವೆ’ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
‘ಬಲಾಢ್ಯರು ಮಾತ್ರ ಬದುಕಿ, ಉಳಿದವರು ಗುಲಾಮರಾಗಿ, ಬಲಾಢ್ಯರಿಗಾಗಿ ದುಡಿಯಬೇಕು ಎನ್ನುವ ಮನುವಾದಿ ಸಿದ್ಧಾಂತದ ಮಾದರಿಯೇ ಸಾಮಾಜಿಕ ಡಾರ್ವಿನ್‌ವಾದ. ಈ ಮೃಗೀಯ ಸಿದ್ದಾಂತಕ್ಕೆ ಎದುರಾಗಿ ಅಸಹಾಯಕರಿಗೆ ಮೊದಲು ಆದ್ಯತೆ ಸಿಗಬೇಕು ಎನ್ನುವುದು ನಮ್ಮ ಸಂವಿಧಾನವಾದ. ಆದ್ದರಿಂದ ನಾವು ಸಂವಿಧಾನದ ಉಳಿವಿಗಾಗಿ ಪಣ ತೊಡೋಣ’ ಎಂದು ಕರೆ ನೀಡಿದರು.
ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಹೇರೋಹಳ್ಳಿ ಬಿಬಿಎಂಪಿ ಪಿಯು ಕಾಲೇಜು ವಿದ್ಯಾರ್ಥಿಗಳು ಗ್ಯಾರಂಟಿ ಯೋಜನೆಗಳ ಕುರಿತು ಸಮೂಹ ನೃತ್ಯ ಪ್ರದರ್ಶಿಸಿದರು
ಪ್ರೊ. ಥೋರಟ್ ಸಮಿತಿ ಸೂಚನೆಯಂತೆ ಕರ್ನಾಟಕಕ್ಕೆ ಪ್ರತ್ಯೇಕ ಶಿಕ್ಷಣ ನೀತಿ ಜಾರಿ
ಮೊಬೈಲ್ ಬಿಡಿ - ಪುಸ್ತಕ ಹಿಡಿ ಮತ್ತು ಓದು ಕರ್ನಾಟಕ ಎಂಬ ಕಾರ್ಯಕ್ರಮ
ಅಗತ್ಯ ಇರುವ ಕಡೆಗಳಲ್ಲಿ ಹೊಸದಾಗಿ ವಸತಿ ಶಾಲೆಗಳು, ವಸತಿ ನಿಲಯಗಳ ಸ್ಥಾಪನೆ
ಕರ್ನಾಟಕ ಗೃಹ ಮಂಡಳಿಯಲ್ಲಿ ರಾಜ್ಯದಾದ್ಯಂತ 26 ವಸತಿ ಯೋಜನೆಗಳು ಪ್ರಗತಿ
2027ರ ವೇಳೆಗೆ ಎತ್ತಿನ ಹೊಳೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿ
ನಮ್ಮ ಸರ್ಕಾರವು ಎರಡು ವರ್ಷದಲ್ಲಿ ಬೆಂಗಳೂರು ನಗರಾಭಿವೃದ್ಧಿಗಾಗಿ ಸುಮಾರು ₹ 1.35 ಲಕ್ಷ ಕೋಟಿ ಗಳಿಗೂ ಹೆಚ್ಚಿನ ವೆಚ್ಚ ಮಾಡಲು ಮುಂದಾಗಿದೆ. ಮುಖ್ಯವಾಗಿ ಯೋಜನೆ ಹೊಸ ಮೆಟ್ರೊ ರೈಲು ಮಾರ್ಗಗಳು ಡಬಲ್ ಡೆಕ್ಕರ್ ರಸ್ತೆಗಳು ಸುರಂಗ ರಸ್ತೆಗಳು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ವೈಟ್ ಟಾಪಿಂಗ್ ರಸ್ತೆಗಳು 6ನೇ ಹಂತದ ಕಾವೇರಿ ನೀರು ಸರಬರಾಜು ಬಫರ್ ರಸ್ತೆ ಮೇಲ್ಸೇತುವೆ ಉತ್ತರ-ದಕ್ಷಿಣ ಹಾಗೂ ಪೂರ್ವ-ಪಶ್ಚಿಮ ಕಾರಿಡಾರ್ ಸಾರ್ವಜನಿಕ ಪಾರ್ಕಿಂಗ್ ವ್ಯವಸ್ಥೆ ಶಿಕ್ಷಣ-ಆರೋಗ್ಯ ವ್ಯವಸ್ಥೆಯ ಸುಧಾರಣೆ ಟ್ರಾಫಿಕ್ ನಿರ್ವಹಣೆ ಸೇರಿದ್ದು ಕೆಲವು ಚಾಲನೆಗೊಂಡಿವೆ ಎಂದು ಸಿದ್ದರಾಮಯ್ಯ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.