ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ 660 ಕೆವಿ ಕರೆಂಟ್ ಇದ್ದಂತೆ: ಮುನಿರತ್ನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 15:31 IST
Last Updated 10 ಫೆಬ್ರುವರಿ 2025, 15:31 IST
ಮುನಿರತ್ನ ಹಾಗೂ ಸಿದ್ದರಾಮಯ್ಯ
ಮುನಿರತ್ನ ಹಾಗೂ ಸಿದ್ದರಾಮಯ್ಯ   

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಟ್ಟುವುದು ಸುಲಭ ಅಲ್ಲ. ಮುಟ್ಟಿದರೆ ಕಾಂಗ್ರೆಸ್‌ಗೆ ಸಂಕಷ್ಟ ತಪ್ಪಿದ್ದಲ್ಲ’ ಎಂದು ಬಿಜೆಪಿ ಶಾಸಕ ಮುನಿರತ್ನ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಿದ್ದರಾಮಯ್ಯ 11 ಕೆವಿ ಕರೆಂಟಲ್ಲ. ಅದು 660 ಕೆವಿ ಕರೆಂಟ್‌. ಅದನ್ನು ಮುಟ್ಟುವುದು ಅಷ್ಟು ಸುಲಭ ಅಲ್ಲ. ಅದನ್ನು ಮುಟ್ಟಿ ಗೆಲ್ಲುತ್ತೇವೆ. ಚಲಾವಣೆ ಆಗ್ತೀವಿ ಅಂದುಕೊಂಡರೆ ಅದು ಭ್ರಮೆ’ ಎಂದರು.

‘ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಆಚೆ ಹೋದರೆ ಪರಿಣಾಮ ಏನಾಗುತ್ತದೆ ಅನ್ನುವುದು ಅವರ ನಾಯಕರಿಗೇ ಗೊತ್ತಿಲ್ಲ. ಅವರ ಜತೆ ಐದು ವರ್ಷ ಕೆಲಸ ಮಾಡಿದ್ದೇನೆ. ಅವರ ಒಡನಾಟ ಇಟ್ಟುಕೊಂಡಿದ್ದೇನೆ. ಅವರ ಮನಸ್ಥಿತಿ ಗೊತ್ತಿದೆ. ಅವರ ಶಕ್ತಿಯನ್ನೂ ನೋಡಿದ್ದೇನೆ’ ಎಂದರು.

ADVERTISEMENT

‘ಇವತ್ತು ಅವರು 2 ಗಂಟೆಗೆ ಭಾಷಣಕ್ಕೆ ಬರುತ್ತಾರೆ. ಅಂದರೆ 6 ಗಂಟೆಯವರೆಗೆ ಜನ ಕಾಯುತ್ತಾರೆ. ಅವರ ಒಂದು ಕರೆಗೆ 10 ಲಕ್ಷ ಜನ ಸೇರುತ್ತಾರೆ. ಅಂತಹ ಶಕ್ತಿ ಇರುವವರು ಕಾಂಗ್ರೆಸ್‌ನಲ್ಲಿ ಬೇರೆ ಯಾರಿದ್ದಾರೆ’ ಎಂದೂ ಪ್ರಶ್ನಿಸಿದರು.

‘ಸಿದ್ದರಾಮಯ್ಯ ಹೊರತಾಗಿ ಕಾಂಗ್ರೆಸ್‌ ಶೂನ್ಯ. ರಾಜಕಾರಣದಲ್ಲಿ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಮುಡಾ ಹಗರಣವನ್ನು ಸಿಬಿಐಗೆ ಕೊಟ್ಟರೆ ಸಾಕು, ಸಿದ್ದರಾಮಯ್ಯ ಅವರನ್ನು ಸಿಲುಕಿಸಿದರೆ ಸಾಕು, ಅಂತಾ ಕಾಯ್ತಾ ಇರುವವರು ಕಾಂಗ್ರೆಸ್‌ನಲ್ಲಿ ಇದ್ದಾರೆ. ಕೇಜ್ರಿವಾಲ್‌ ರೀತಿ ಸಿದ್ದರಾಮಯ್ಯ ಬಂಧನಕ್ಕೆ ಒಳಗಾದರೆ, ತಾವು ಮುಖ್ಯಮಂತ್ರಿ ಆಗಬಹುದು ಎಂದು ಕೆಲವರು ಕಾಯ್ತಾ ಕುಳಿತ್ತಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೆ ಆರು ತಿಂಗಳಲ್ಲೇ ಚುನಾವಣೆ ಬರುತ್ತದೆ. ಅದಕ್ಕೆ ನಾವು(ಬಿಜೆಪಿ) ಸಿದ್ಧವಾಗಬೇಕಿದೆ. ಅವರು ಬರುವ ಮುನ್ನ ಕಾಂಗ್ರೆಸ್‌ ಯಾವ ಸ್ಥಿತಿಯಲ್ಲಿ ಇತ್ತೋ ಅದೇ ಸ್ಥಿತಿಗೆ ಹೊರಟು ಹೋಗುತ್ತದೆ. ಸಿದ್ದರಾಮಯ್ಯ ಸೇರುವುದಕ್ಕೂ ಮೊದಲು ಓಟ್‌ ತರುವವರೇ ಇರಲಿಲ್ಲ. ಅವರಿಂದಲೇ ಕಾಂಗ್ರೆಸ್‌ ಬೆಳೆದಿದ್ದು, ಸಿದ್ದರಾಮಯ್ಯ ಇಲ್ಲದ ಕಾಂಗ್ರೆಸ್‌ ಶೂನ್ಯ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.