ಸಿದ್ದರಾಮಯ್ಯ
ಬೆಂಗಳೂರು: ‘ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಧಿಕಾರ ಹಾಗೂ ಆರ್ಥಿಕ ಹಂಚಿಕೆಯ ಅಸಮತೋಲನ ಸರಿಪಡಿಸಲು ಬಲವಾದ ಸಾಂಸ್ಥಿಕ ವೇದಿಕೆಯೊಂದನ್ನು ರಚಿಸಬೇಕಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಪತ್ರ ಹಂಚಿಕೊಂಡಿರುವ ಸಿದ್ದರಾಮಯ್ಯ, ‘ಪ್ರಸ್ತುತ ನಿಷ್ಕ್ರಿಯವಾಗಿರುವ ‘ಅಂತರರಾಜ್ಯ ಮಂಡಳಿ’ಯನ್ನು ತಕ್ಷಣ ಪುನರುಜ್ಜೀವನಗೊಳಿಸಿ, ಸಮಾನ ಮನಸ್ಕ ರಾಜ್ಯಗಳು ಒಟ್ಟುಗೂಡಿ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲು ಅವಕಾಶ ಕಲ್ಪಿಸಬೇಕಿದೆ’ ಎಂದಿದ್ದಾರೆ.
ಭಾರತದ ಸಾಂವಿಧಾನಿಕ ಚೌಕಟ್ಟಿನಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಕೇಂದ್ರ- ರಾಜ್ಯ ಸಂಬಂಧದ ಕುರಿತು ರಾಷ್ಟ್ರಮಟ್ಟದ ಚರ್ಚೆಗೆ ಬೆಂಬಲ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ‘ಒಕ್ಕೂಟ ವ್ಯವಸ್ಥೆಯ ಸಮತೋಲನವನ್ನು ಮರುಸ್ಥಾಪಿಸುವ ಹಾಗೂ ಭಾರತದ ಪ್ರಜಾಸತ್ತಾತ್ಮಕ ಚೌಕಟ್ಟನ್ನು ಬಲಪಡಿಸುವ ಯಾವುದೇ ರಚನಾತ್ಮಕ ಮತ್ತು ಸಕಾರಾತ್ಮಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಕರ್ನಾಟಕ ಸದಾ ಸಿದ್ಧವಾಗಿದೆ’ ಎಂದೂ ಹೇಳಿದ್ದಾರೆ.
‘ಒಕ್ಕೂಟ ವ್ಯವಸ್ಥೆ ಎನ್ನುವುದು ಕೇವಲ ಒಂದು ರಾಜಕೀಯ ಬೇಡಿಕೆಯಲ್ಲ, ಅದು ನಮ್ಮ ಸಂವಿಧಾನದ ಮೂಲಭೂತ ರಚನೆಯ ಅವಿಭಾಜ್ಯ ಅಂಗ. ಕಳೆದ ಕೆಲವು ವರ್ಷಗಳಿಂದ ಆರ್ಥಿಕ ಮತ್ತು ಶಾಸಕಾಂಗ ವಿಷಯಗಳಲ್ಲಿ ಅಧಿಕಾರವು ಕೇಂದ್ರದತ್ತ ಹೆಚ್ಚು ಕೇಂದ್ರೀಕೃತವಾಗುತ್ತಿದೆ. ಇದು ಸಂವಿಧಾನ ರಚನೆಕಾರರು ರೂಪಿಸಿದ್ದ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸೂಕ್ಷ್ಮ ಸಮತೋಲನವನ್ನು ಕದಡಿದೆ. ರಾಜ್ಯಗಳಿಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಲು ಮತ್ತು ಜನಪರ ಯೋಜನೆಗಳನ್ನು ಜಾರಿಗೊಳಿಸಲು ಅವುಗಳಿಗೆ ಅಗತ್ಯವಿರುವ ಅಧಿಕಾರ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸುವುದು ಇಂದಿನ ತುರ್ತು ಅಗತ್ಯವಾಗಿದೆ’ ಎಂದೂ ಪತ್ರದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.
‘ರಾಜ್ಯಗಳು ಕೇವಲ ಕೇಂದ್ರದ ಯೋಜನೆಗಳನ್ನು ಜಾರಿಗೊಳಿಸುವ ಮತ್ತು ಅನುದಾನಕ್ಕಾಗಿ ಕಾಯುವ ಏಜೆನ್ಸಿಗಳಾಗಬಾರದು. ತಮ್ಮದೇ ಆದ ಆರ್ಥಿಕ ಸ್ವಾಯತ್ತತೆ ಹೊಂದಿರಬೇಕು. ವೈವಿಧ್ಯದಲ್ಲಿ ಏಕತೆ ಸಾಧಿಸಿರುವ ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ, ಎಲ್ಲ ರಾಜ್ಯಗಳ ಭೌಗೋಳಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳನ್ನು ಸಮಾನವಾಗಿ ಗೌರವಿಸಿದಾಗ ಮಾತ್ರ ದೇಶದ ಒಟ್ಟಾರೆ ಮತ್ತು ಸಮಗ್ರ ಅಭಿವೃದ್ಧಿ ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.